ಅಬುಧಾಬಿ: ಸೂರ್ಯಕುಮಾರ್ ಯಾದವ್ ಅವರ ಸ್ಫೋಟಕ ಅರ್ಧಶತಕದ ನೆರವಿನಿಂದ ಹಾಲಿ ಚಾಂಪಿಯನ್ ಮುಂಬೈ ತಂಡ 20 ಓವರ್ಗಳಲ್ಲಿ 193 ರನ್ಗಳಿಸಿದ್ದು, ರಾಯಲ್ಸ್ಗೆ 194 ರನ್ಗಳ ಟಾರ್ಗೆಟ್ ನೀಡಿದೆ.
ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ಮುಂಬೈ ಇಂಡಿಯನ್ಸ್ ತಂಡಕ್ಕೆ ಡಿಕಾಕ್ ಮತ್ತು ರೋಹಿತ್ ಶರ್ಮಾ 49 ರನ್ಗಳ ಜೊತೆಯಾಟ ನೀಡಿದರು. ಡಿಕಾಕ್ 15 ಎಸೆತಗಳಲ್ಲಿ 23 ರನ್ಗಳಿಸಿ ಇಂದೇ ಪದಾರ್ಪಣೆ ಮಾಡಿದ ಅಂಡರ್ 19 ಸ್ಟಾರ್ ಕಾರ್ತಿಕ್ ತ್ಯಾಗಿಗೆ ವಿಕೆಟ್ ಒಪ್ಪಿಸಿದರು.
ನಂತರ ಯಾದವ್ ಜೊತೆಗೂಡಿದ ರೋಹಿತ್ 2ನೇ ವಿಕೆಟ್ 33 ರನ್ ಸೇರಿಸಿ ಔಟಾದರು. ಅವರು ಶ್ರೇಯಸ್ ಗೋಪಾಲ್ಗೆ ವಿಕೆಟ್ ಒಪ್ಪಿಸುವ ಮುನ್ನ 23 ಎಸೆತಗಳಲ್ಲಿ 3 ಸಿಕ್ಸರ್ ಹಾಗೂ 2 ಬೌಂಡರಿ ಸಹಿತ 35 ರನ್ಗಳಿಸಿದರು. ರೋಹಿತ್ ಔಟಾದ ನಂತರದ ಎಸೆತದಲ್ಲೆ ಇಶಾನ್ ಕಿಶನ್ ಡಕ್ಔಟ್ ಆದರು.
ನಂತರ ಬಡ್ತಿ ಪಡೆದು ಬಂದ ಕೃನಾಲ್ 17 ಎಸೆತಗಳಲ್ಲಿ ಕೇವಲ 12 ರನ್ಗಳಿಸಿ ಔಟಾದರು. ಆದರೆ ಕೊನೆಯವರೆಗೂ ಅಬ್ಬರದ ಬ್ಯಾಟಿಂಗ್ ಪ್ರದರ್ಶನ ನೀಡಿದ ಸೂರ್ಯಕುಮಾರ್ ಯಾದವ್ 47 ಎಸೆತಗಳಲ್ಲಿ 2 ಸಿಕ್ಸರ್ ಹಾಗೂ 11 ಬೌಂಡರಿ ಸಹಿತ 79 ರನ್ಗಳಿಸಿ ಔಟಾಗದೆ ಉಳಿದರು. ಇವರಿಗೆ ಸಾಥ್ ನೀಡಿದ ಹಾರ್ದಿಕ್ ಪಾಂಡ್ಯ 19 ಎಸೆತಗಳಲ್ಲಿ 1 ಸಿಕ್ಸರ್ ಹಾಗೂ 2 ಬೌಂಡರಿ ಸಹಿತ 30 ರನ್ಗಳಿಸಿ 193 ರನ್ಗಳ ಬೃಹತ್ ಮೊತ್ತಕ್ಕೆ ಕಾರಣರಾದರು.
ರಾಯಲ್ಸ್ ಪರ ಶ್ರೇಯಸ್ ಗೋಪಾಲ್ 28ಕ್ಕೆ 2 , ಕಾರ್ತಿಕ್ ತ್ಯಾಗಿ 36ಕ್ಕೆ1 ಹಾಗೂ ಆರ್ಚರ್ 34ಕ್ಕೆ 1 ವಿಕೆಟ್ ಪಡೆದು ಮಿಂಚಿದರು.