ಸಿಂಗಾಪೂರ್: 30ಕ್ಕೂ ಹೆಚ್ಚು ವರ್ಷಗಳಿಂದಲೂ ಕ್ರಿಕೆಟ್ನಲ್ಲಿ ತೊಡಗಿಸಿಕೊಂಡಿರುವ ಜಿಂಬಾಬ್ವೆ ತಂಡವನ್ನು ಈಗಷ್ಟೇ ಕಣ್ಣು ಬಿಡುತ್ತಿರುವ ಸಿಂಗಾಪುರ್ ತಂಡ ಸೋಲಿಸುವ ಮೂಲಕ ಇತಿಹಾಸ ಬರೆದಿದೆ.
ಟಿ-20 ಕ್ರಿಕೆಟ್ನಲ್ಲಿ ಐಸಿಸಿ ಅಸೋಸಿಯೇಟ್ ಅಗಿರುವ ಸಿಂಗಾಪುರ್ ಆತಿಥ್ಯದಲ್ಲಿ ನಡೆಯುತ್ತಿರುವ ತ್ರಿಕೋನ ಟಿ-20 ಸರಣಿಯಲ್ಲಿ ಜಿಂಬಾಬ್ವೆ ವಿರುದ್ಧ 4 ರನ್ಗಳಿಂದ ಗೆಲುವು ಸಾಧಿಸುವ ಮೂಲಕ ಸಿಂಗಾಪುರ್ ತಂಡ ಇತಿಹಾಸ ನಿರ್ಮಿಸಿದೆ.
ಮೊದಲು ಬ್ಯಾಟಿಂಗ್ ನಡೆಸಿದ ಸಿಂಗಾಪುರ್ 18 ಓವರ್ಗಳ ಪಂದ್ಯದಲ್ಲಿ 181 ರನ್ ಗಳಿಸಿತು. ರೋಹನ್ ರಂಗರಾಜನ್ 39, ಟಿಮ್ ಡೇವಿಡ್ 41, ಮನ್ಪ್ರೀತ್ ಸಿಂಗ್ 41 ಗಳಿಸಿ 181 ರನ್ಗಳ ಬೃಹತ್ ಮೊತ್ತ ದಾಖಲಿಸಲು ನೆರವಾದರು.
182 ರನ್ಗಳ ಮೊತ್ತ ಬೆನ್ನತ್ತಿದ ಜಿಂಬಾಬ್ವೆ 18 ಓವರ್ಗಳಲ್ಲಿ 177 ರನ್ಗಳಿಸಲಷ್ಟೇ ಶಕ್ತವಾಗಿ 4 ರನ್ಗಳ ಸೋಲನುಭವಿಸಿತು. ರೆಗಿಸ್ ಚಕಬ್ವಾ 48, ಸೀನ್ ವಿಲಿಯಮ್ಸ್ 66 ಹಾಗೂ ಟಿನೋಟೆಂಡ ಮುಟೊಂಬೊಡ್ಜಿ 32 ರನ್ ಗಳಿಸಿ ತಂಡವನ್ನು ಗೆಲುವಿನ ಸನಿಹ ತಂದರು.
ಆದರೆ 35 ಎಸೆತಗಳಲ್ಲಿ ತಲಾ 5 ಸಿಕ್ಸರ್ ಹಾಗೂ ಬೌಂಡರಿ ಸಿಡಿಸಿ 66 ರನ್ ಗಳಿಸಿದ್ದ ವಿಲಿಯಮ್ಸ್ ಔಟಾಗುತ್ತಿದ್ದಂತೆ ದಿಢೀರ್ ಕುಸಿತ ಕಂಡ ಜಿಂಬಾಬ್ವೆ 12 ಎಸೆತಗಳಲ್ಲಿ 16 ರನ್ ಗಳಿಸಲಾಗದೆ 4 ರನ್ಗಳಿಂದ ಸೋಲೊಪ್ಪಿಕೊಂಡಿತು.