ಮುಂಬೈ: ಭಾರತ ತಂಡದಲ್ಲಿ ಕಳೆದ ನಾಲ್ಕೈದು ವರ್ಷಗಳಿಂದ ನಾಲ್ಕನೇ ಕ್ರಮಾಂಕಕ್ಕೆ ಸೂಕ್ತವಾದ ಆಟಗಾರನ ಆಯ್ಕೆಗೆ ಬಿಸಿಸಿಐ ನಡೆಸಿದ ಪ್ರಯೋಗಕ್ಕೆ ಇದೀಗ ಯಶಸ್ಸು ಸಿಕ್ಕಿದೆ.
ಹೌದು, ಕಳೆದ ವರ್ಷ ಏಕದಿನ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ್ದ ಶ್ರೇಯಸ್ ಅಯ್ಯರ್ ನಾಲ್ಕನೇ ಕ್ರಮಾಂಕದಲ್ಲಿ ಆಡಿ ಯಶಸ್ವಿಯೂ ಆಗಿದ್ದರು. ಆದರೆ, ವಿಶ್ವಕಪ್ ತಂಡದಲ್ಲಿ ಅವಕಾಶವಂಚಿತರಾಗಿ ನಿರಾಶೆಯನುಭವಿಸಿದ್ದ ಅವರು ವಿಂಡೀಸ್ ವಿರುದ್ಧ ಸರಣಿಯಲ್ಲಿ ಮತ್ತೆ ರಾಷ್ಟ್ರೀಯ ತಂಡಕ್ಕೆ ಕಮ್ಬ್ಯಾಕ್ ಮಾಡಿ ಅರ್ಧಶತಕ ಸಿಡಿಸುವ ಮೂಲಕ ತಮ್ಮ ಆಯ್ಕೆಯನ್ನು ಸಮರ್ಥಿಸಿಕೊಂಡಿದ್ದರು.
ಇದೀಗ ಟಿ-20 ಕ್ರಿಕೆಟ್ಯಲ್ಲೂ ತಮ್ಮ ತಾಕತ್ತು ಪ್ರದರ್ಶಿಸಿರುವ ಅಯ್ಯರ್ ಬಾಂಗ್ಲಾದೇಶದ ವಿರುದ್ಧ ನಡೆದ ಮೂರನೇ ಟಿ-20 ಪಂದ್ಯದಲ್ಲಿ ಅರ್ಧಶತಕ ಸಿಡಿಸಿ ಮುಂಬರುವ ವಿಶ್ವಕಪ್ಗೆ ತಾವೇ 4 ನೇ ಕ್ರಮಾಂಕಕ್ಕೆ ಸೂಕ್ತ ಎಂಬುದನ್ನು ತೋರಿಸಿಕೊಟ್ಟಿದ್ದಾರೆ.
ನಿನ್ನೆಯ ಪಂದ್ಯದಲ್ಲಿ ರೋಹಿತ್-ಧವನ್ ಬೇಗ ಔಟಾಗಿ ಪೆವಿಲಿಯನ್ ಸೇರಿಕೊಂಡಿದ್ದರು. ಆ ವೇಳೆ, ಕ್ರೀಸ್ಗೆ ಆಗಮಿಸಿದ ಅಯ್ಯರ್ ಮೊದಲು ರಾಹುಲ್ಗೆ ಹೆಚ್ಚಿನ ಸ್ಟ್ರೈಕ್ ನೀಡುತ್ತಾ ರನ್ ಸೇರಿಸಲು ನೆರವಾದರು. ರಾಹುಲ್ ಅರ್ಧಶತಕ ಸಿಡಿಸಿ ಔಟಾದ ನಂತರ ವೇಗವಾಗಿ ಬ್ಯಾಟ್ ಬೀಸಿ 33 ಎಸೆತಗಳಲ್ಲಿ ಹ್ಯಾಟ್ರಿಕ್ ಸೇರಿದಂತೆ 5 ಭರ್ಜರಿ ಸಿಕ್ಸರ್ ಹಾಗೂ 3 ಬೌಂಡರಿ ಸಹಿತ 62 ರನ್ಗಳಿಸಿದರು.
2020ರಲ್ಲಿ ಟಿ-20 ವಿಶ್ವಕಪ್ ಇರುವುದರಿಂದ ಭಾರತ ತಂಡಕ್ಕೆ ನಾಲ್ಕನೇ ಕ್ರಮಾಂಕಕ್ಕೆ ಶ್ರೇಯಸ್ ಅಯ್ಯರ್ ಬಹುತೇಕ ಖಚಿತ ಎನ್ನಲಾಗುತ್ತಿದ್ದರೂ, ಶ್ರೇಯಸ್ ಮಾತ್ರ ತಾವೂ ಯಾವುದೇ ಕ್ರಮಾಂಕಕ್ಕಾದರೂ ಸಿದ್ದ, 4ನೇ ಕ್ರಮಾಂಕಕ್ಕೆ ತುಂಬಾ ಪೈಪೋಟಿಯಿದೆ. ಅಲ್ಲದೇ ಎಲ್ಲರೂ ಉತ್ತಮವಾಗಿ ಬ್ಯಾಟಿಂಗ್ ನಡೆಸುವವರೇ ಇರುವುದರಿಂದ ಇಲ್ಲಿ ಯಾರೊಬ್ಬರನ್ನು ಕಡೆಗಣಿಸಿ ನನ್ನನ್ನು ನಾನು ಸಮರ್ಥಿಸಿಕೊಳ್ಳುವುದಿಲ್ಲ. ತಂಡದ ಆಡಳಿತ ಮಂಡಳಿ ನನಗೆ 4ನೇ ಕ್ರಮಾಂಕ ನೀಡಿದೆ, ಅದರಲ್ಲಿ ಮುಂದುವರಿಯುವತ್ತ ನನ್ನ ಗಮನ ಎಂದಿದ್ದಾರೆ.