ಮುಂಬೈ:ಭುಜದ ಶಸ್ತ್ರ ಚಿಕಿತ್ಸೆಗೆ ಒಳಗಾಗಿರುವ ಡೆಲ್ಲಿ ತಂಡದ ನಾಯಕ ಶ್ರೇಯಸ್ ಅಯ್ಯರ್ ಶನಿವಾರ ಸಿಎಸ್ಕೆ ವಿರುದ್ಧದ ಮೊದಲ ಪಂದ್ಯಕ್ಕೂ ಮುನ್ನ ಆಟಗಾರರಿಗೆ ವಿಶೇಷ ಸಂದೇಶ ರವಾನಿಸಿ ಶುಭ ಕೋರಿದ್ದಾರೆ.
ಶನಿವಾರ ಐಪಿಎಲ್ನ 2ನೇ ಪಂದ್ಯ ನಡೆಯಲಿದೆ. ಮೂರು ಬಾರಿ ಚಾಂಪಿಯನ್ ಆಗಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಯುವ ನಾಯಕ ರಿಷಭ್ ಪಂತ್ ನೇತೃತ್ವದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಮುಂಬೈನ ವಾಂಖೆಡೆಯಲ್ಲಿ ಎದುರಿಸಲಿದೆ. ಇತ್ತೀಚೆಗೆ ಭುಜದ ಶಸ್ತ್ರ ಚಿಕಿತ್ಸೆಗೆ ಒಳಗಾಗಿರುವ ಶ್ರೇಯಸ್ ಅಯ್ಯರ್ ಆಟಗಾರರಿಗೆ ವಿಶೇಷ ಸಂದೇಶವನ್ನು ರವಾನಿಸಿದ್ದು, ಆ ಧ್ವನಿಯಿರುವ ಆಡಿಯೋವನ್ನು ಡೆಲ್ಲಿ ತಂಡದ ತನ್ನ ಟ್ವಿಟರ್ನಲ್ಲಿ ಶೇರ್ ಮಾಡಿಕೊಳ್ಳಲಾಗಿದೆ.
"ಪ್ರೀತಿಯ ಡೆಲ್ಲಿ, ನಾವೆಲ್ಲಾ ಪ್ರೀತಿಸುವ ತಂಡದ ಒಬ್ಬ ಅಭಿಮಾನಿಯಾಗಿ ನಾನು ಇಂದು ಮಾತನಾಡುತ್ತಿದ್ದೇನೆ. ನಾವು ಯಾವಾಗಲೂ ತೋರುವ ಹೋರಾಟವನ್ನು ಈ ಬಾರಿಯೂ ತೋರಬೇಕಿದೆ. ಅದು ಸುಲಭವಲ್ಲ ಎಂದು ನಮಗೆ ತಿಳಿದಿದೆ. ಆದರೆ ಕಪ್ ಎತ್ತಿ ಹಿಡಿಯಲು ಏನು ಬೇಕಾಗುತ್ತದೆ ಎಂದು ನಮಗೆಲ್ಲಾ ತಿಳಿದಿದೆ. ನಾವು ಮೊದಲಿಗಿಂತ ಹೆಚ್ಚು ಕಷ್ಟಪಟ್ಟು ಕೆಲಸ ಮಾಡಿದ್ದೇವೆ. ನಾವು ಮೈದಾನದಲ್ಲೂ ಹಿಂದಿಗಿಂತ ಕಠಿಣ ಪ್ರಯತ್ನವನ್ನು ಇರಿಸಿದ್ದೇವೆ ಮತ್ತು ಪ್ರಮುಖ ಭಾಗವೆಂದರೆ ನಾವು ಕೇವಲ ತಂಡವಾಗಿರದೆ ಅದನ್ನು ಮೀರಿ ಹೋಗಬೇಕಿದೆ. ಅದರ ಬಗ್ಗೆ ಯಾವುದೇ ತಪ್ಪನ್ನು ಮಾಡಬೇಡಿ" ಎಂದು ಶ್ರೇಯಸ್ ಹೇಳಿದ್ದಾರೆ.