ಪೋರ್ಟ್ ಆಪ್ ಸ್ಪೇನ್:ವಿಂಡೀಸ್ ವಿರುದ್ಧ ಭಾನುವಾರ ನಡೆದ 2ನೇ ಏಕದಿನ ಪಂದ್ಯದಲ್ಲಿ ಆಕರ್ಷಕ ಅರ್ಧಶತಕ ಸಿಡಿಸಿದ ಶ್ರೇಯಸ್ ಅಯ್ಯರ್ ನುಡಿದಂತೆ ನಡೆದುಕೊಂಡು ತಮ್ಮ ಆಯ್ಕೆಯನ್ನು ಸಮರ್ಥಿಸಿಕೊಂಡಿದ್ದಾರೆ.
ಪಂದ್ಯಕ್ಕೂ ಮುನ್ನ ಮಾತನಾಡಿದ್ದ ಅವರು, ನನಗೆ ಯಾವುದೇ ಕ್ರಮಾಂಕ ನೀಡಿದರು ಸಹ ಆಡಲು ಸಿದ್ಧನಿದ್ದೇನೆ. ಒಂದೇ ಕ್ರಮಾಂಕದ ಬಗ್ಗೆ ಚಿಂತೆ ಮಾಡುವುದಿಲ್ಲ. ಸಿಕ್ಕಿರುವ ಅವಕಾಶವನ್ನು ಸದುಪಯೋಗ ಪಡಿಸಿಕೊಂಡು ತಂಡದಲ್ಲಿ ಖಾಯಂ ಸ್ಥಾನ ಅಲಂಕರಿಸುವುದೇ ನನ್ನ ಗುರಿ ಎಂದಿದ್ದರು.
ನಿನ್ನೆಯ ಪಂದ್ಯದಲ್ಲಿ ಅಯ್ಯರ್ ಅದ್ಭುತ ಪ್ರದರ್ಶನ ತೋರಿದರು. 101 ರನ್ಗಳಿಗೆ 3 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ಸಂದರ್ಭದಲ್ಲಿ ಬ್ಯಾಟಿಂಗ್ಗೆ ಆಗಮಿಸಿದ ಅಯ್ಯರ್ ನಾಯಕ ಕೊಹ್ಲಿಗೆ ಒತ್ತಡ ಬರದಂತೆ ನೋಡಿಕೊಂಡರು. 4ನೇ ವಿಕೆಟ್ ಜೊತೆಯಾಟದಲ್ಲಿ125 ರನ್ಗಳನ್ನು ಕೂಡಿಹಾಕಿ 280 ರನ್ಗಳ ಸ್ಪರ್ಧಾತ್ಮಕ ಟಾರ್ಗೆಟ್ ನೀಡಲು ನೆರವಾದರು.
68 ಎಸೆತಗಳನ್ನೆದುರಿಸಿದ ಅಯ್ಯರ್ 5 ಬೌಂಡರಿ, 1 ಸಿಕ್ಸರ್ ಸಿಡಿಸುವ ಮೂಲಕ 71 ರನ್ ಗಳಿಸಿದರು. 8 ಪಂದ್ಯಗಳಲ್ಲಿ ಭಾರತ ತಂಡದ ಪರ ಆಡಿರುವ ಅಯ್ಯರ್ 6 ಇನ್ನಿಂಗ್ಸ್ಗಳಲ್ಲಿ ಬ್ಯಾಟಿಂಗ್ ನಡೆಸಿದ್ದು, 3 ಅರ್ಧಶತಕ ದಾಖಲಿಸಿದ್ದಾರೆ.
ಪಂದ್ಯದ ನಂತರ ಮಾತನಾಡಿದ ಅಯ್ಯರ್, ಈ ಪಂದ್ಯಕ್ಕೂ ಮೊದಲು ಇಂಡಿಯಾ ಎ ಪರ ಇಲ್ಲಿ ಆಡಿರುವುದು ನನಗೆ ಉತ್ತಮ ರನ್ ಕಲೆಹಾಕಲು ನೆರವಾಯಿತು. ವಿರಾಟ್ ನನಗೆ ಸುದೀರ್ಘ ಜೊತೆಯಾಟ ನಡೆಸಲು ಹೇಳಿದ್ದರು. 45ನೇ ಓವರ್ವರೆಗೆ ಬ್ಯಾಟಿಂಗ್ ನಡೆಸುವಂತೆ ಸೂಚಿಸಿದ್ದರು. ಅದರಂತೆ ಹೆಚ್ಚು ಉದ್ವೇಗಕ್ಕೊಳಗಾಗದೆ ತಾಳ್ಮೆಯಿಂದ ಆಡಿದೆ. ಬೌಂಡರಿಗಿಂತ ಒಂಟಿ ರನ್, ಎರಡು ರನ್ಗಳ ಕಡೆ ಹೆಚ್ಚು ಗಮನ ನೀಡಿದೆವು. 250 ರನ್ ಗಳಿಸಬೇಕೆಂಬ ಗುರಿ ಇಟ್ಟುಕೊಂಡಿದ್ದೆವು. ಆದರೆ 30 ರನ್ ಹೆಚ್ಚುವರಿಯಾಗಿ ಪಡೆದಿದ್ದು ಗೆಲುವಿಗೆ ಅನುಕೂಲವಾಯಿತು. ಒಟ್ಟಿನಲ್ಲಿ ನನ್ನ ಪ್ರದರ್ಶನ ನನಗೆ ತೃಪ್ತಿ ತಂದಿದೆ ಎಂದರು.