ಜೈಪುರ್ :ನಾಯಕ ಶ್ರೇಯಸ್ ಅಯ್ಯರ್ ಅವರ ಭರ್ಜರಿ ಶತಕದ ನೆರವನಿಂದ ಬಲಿಷ್ಠ ಮುಂಬೈ ತಂಡ ಮಹಾರಾಷ್ಟ್ರ ತಂಡವನ್ನು 6 ವಿಕೆಟ್ಗಳಿಂದ ಮಣಿಸುವ ಮೂಲಕ ವಿಜಯ ಹಜಾರೆ ಟೂರ್ನಿಯಲ್ಲಿ ಸತತ ಎರಡನೇ ಜಯ ಸಾಧಿಸಿದೆ.
ಜೈಪುರದ ಕೆಎಲ್ ಸೈನಿ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಮಹಾರಾಷ್ಟ್ರ ನೀಡಿದ 280 ರನ್ಗಳ ಗುರಿಯನ್ನು ಮುಂಬೈ ತಂಡ 47.2 ಓವರ್ಗಳಲ್ಲಿ 4 ವಿಕೆಟ್ ಕಳೆದುಕೊಂಡು ತಲುಪಿತು.
ಆರಂಭಿಕರಾದ ಪೃಥ್ವಿ ಶಾ(34) ಮತ್ತು ಯಶಸ್ವಿ ಜೈಸ್ವಾಲ್(40) ಮೊದಲ ವಿಕೆಟ್ಗೆ 67 ರನ್ಗಳ ಜೊತೆಯಾಟ ನೀಡಿ ಉತ್ತಮ ಆರಂಭ ಒದಗಿಸಿಕೊಟ್ಟರು. ಸೂರ್ಯ ಕುಮಾರ್ ಯಾದವ್ 29 ರನ್ಗಳಿಸಿ ಔಟಾದರು.
ಆದರೆ, ನಾಯಕ ಶ್ರೇಯಸ್ ಅಯ್ಯರ್ 99 ಎಸೆತಗಳಲ್ಲಿ 9 ಬೌಂಡರಿ ಮತ್ತು 1 ಸಿಕ್ಸರ್ ಸಹಿತ ಅಜೇಯ 103 ರನ್ಗಳಿಸಿ ತಂಡಕ್ಕೆ ಗೆಲುವು ತಂದುಕೊಟ್ಟರು. ಇವರಿಗೆ ಸಾಥ್ ನೀಡಿದ ಶಿವಂ ದುಬೆ 39 ಎಸೆತಗಳಲ್ಲಿ 5 ಬೌಂಡರಿ ಮತ್ತು 1 ಸಿಕ್ಸರ್ ಸಹಿತ 47 ರನ್ಗಳಿಸಿ ಗೆಲುವಿನ ರೂವಾರಿಯಾದರು.
ಇದಕ್ಕೂ ಮುನ್ನ ಬ್ಯಾಟಿಂಗ್ ಮಾಡಿದ ಮಹಾರಾಷ್ಟ್ರ ತಂಡ ಯಶ್ ನಹಾರ್(119) ಮತ್ತು ಅಜೀಮ್ ಕಾಜಿ(104) ಶತಕಗಳ ನೆರವಿನಿಂದ 279 ರನ್ಗಳ ಸ್ಪರ್ಧಾತ್ಮ ಮೊತ್ತ ದಾಖಲಿಸಿತ್ತು. ಇವರಿಬ್ಬರನ್ನು ಬಿಟ್ಟರೆ ತಂಡದ ಯಾವೊಬ್ಬ ಬ್ಯಾಟ್ಸ್ಮನ್ 20 ರನ್ ಗಡಿ ದಾಟಲು ವಿಫಲರಾದರು.
ಮುಂಬೈ ಪರ ಅದ್ಭುತ ಬೌಲಿಂಗ್ ದಾಳಿ ನಡೆಸಿದ ದವಳ್ ಕುಲಕರ್ಣಿ 5 ವಿಕೆಟ್ ಪಡೆದರೆ, ಠಾಕೂರ್ ಮತ್ತು ತುಷಾರ್ ದೇಶಪಾಂಡೆ ತಲಾ ಒಂದು ವಿಕೆಟ್ ಪಡೆದರು.
ಇದನ್ನು ಓದಿ:ಮೊಟೆರಾದಲ್ಲಿ ಸ್ಪಿನ್ನರ್ಗಳು ಮೇಲುಗೈ ಸಾಧಿಸಲಿದ್ದಾರೆ ಎಂಬ ವಾದಕ್ಕೆ ಕೊಹ್ಲಿ ಕೊಟ್ಟ ಪ್ರತ್ಯುತ್ತರ ಇಷ್ಟೇ..