ಮುಂಬೈ: ಪಾಕಿಸ್ತಾನದ ಶೋಯಬ್ ಮಲಿಕ್, ಆಸೀಸ್ನ ಸ್ಟಿವ್ ಸ್ಮಿತ್ಗಿಂತ ಸ್ಪಿನ್ ಬೌಲಿಂಗ್ಗೆ ತುಂಬಾ ಚೆನ್ನಾಗಿ ಬ್ಯಾಟಿಂಗ್ ಮಾಡಲು ನಿಸ್ಸೀಮರು ಎಂದು ಭಾರತ ತಂಡದ ಸ್ಪಿನ್ನರ್ ಯಜುವೇಂದ್ರ ಚಹಾಲ್ ಅಭಿಪ್ರಾಯ ಪಟ್ಟಿದ್ದಾರೆ.
ಸ್ಪಿನ್ ಬೌಲಿಂಗ್ಗೆ ಭಾರತದ ಬ್ಯಾಟ್ಸ್ಮನ್ಗಳು ತುಂಬಾ ಸುಲಭವಾಗಿ ಆಡುತ್ತಾರೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಪ್ರಸ್ತುತ ವಿಶ್ವದ ಅತ್ಯುತ್ತಮ ಸ್ಪಿನ್ನರ್ಗಳಲ್ಲಿ ಒಬ್ಬರಾದ ಯಜುವೇಂದ್ರ ಚಹಾಲ್ ಪ್ರಸ್ತುತ ಬ್ಯಾಟ್ಸ್ಮನ್ಗಳಲ್ಲಿ ಸ್ಪಿನ್ ಬೌಲಿಂಗ್ಗೆ ಸುಲಭವಾಗಿ ರನ್ಗಳಿಸುವ ಆಟಗಾರರನ್ನು ಪಟ್ಟಿ ಮಾಡಿದ್ದಾರೆ. ಆಶ್ಚರ್ಯ ಎಂದರೆ ಪಾಕಿಸ್ತಾನದ ಶೋಯಬ್ ಮಲಿಕ್ ಆಸ್ಟ್ರೇಲಿಯಾದ ಸ್ಟಾರ್ ಬ್ಯಾಟ್ಸ್ಮನ್ ಸ್ಟಿವ್ ಸ್ಮಿತ್ಗಿಂತ ಸ್ಪಿನ್ ಬೌಲಿಂಗ್ಗೆ ಚೆನ್ನಾಗಿ ಆಡುತ್ತಾರೆ ಎಂದು ಹೇಳುವ ಮೂಲಕ ಆಶ್ಚರ್ಯ ಮೂಡಿಸಿದ್ದಾರೆ.
ಇನ್ಸ್ಟಾಗ್ರಾಂ ಲೈವ್ ವೇಳೆ ಸ್ಪಿನ್ಬೌಲಿಂಗ್ಗೆ ಸುಲಭವಾಗಿ ಆಡುವ ಬ್ಯಾಟ್ಸ್ಮನ್ಗಳ ಹೆಸರುಗಳನ್ನು ಆಯ್ಕೆ ಮಾಡಿರುವ ಚಹಾಲ್, ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾರ ಹೆಸರನ್ನು ಮೊದಲು ಆಯ್ಕೆ ಮಾಡಿದ್ದಾರೆ. ನಂತರ ನ್ಯೂಜಿಲ್ಯಾಂಡ್ನ ನಾಯಕ ಕೇನ್ ವಿಲಿಯಮ್ಸನ್ರನ್ನ ಸ್ಪಿನ್ ಬೌಲಿಂಗ್ಗೆ ಅದ್ಭುತವಾಗಿ ಬ್ಯಾಟಿಂಗ್ ನಡೆಸುವ ಬ್ಯಾಟ್ಸ್ಮನ್ ಎಂದು ಹೇಳಿದ್ದಾರೆ. ಅವರಿಗೆ ಬೌಲಿಂಗ್ ಮಾಡುವುದು ಕೂಡ ಕಷ್ಟ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.
“ವಿರಾಟ್ ಹಾಗೂ ರೋಹಿತ್ ಸ್ಪಿನ್ ಬೌಲಿಂಗ್ ಅದ್ಭುತವಾಗಿ ಆಡುವ ಬ್ಯಾಟ್ಸ್ಮನ್ಗಳೆನ್ನವುದರಲ್ಲಿ ಅನುಮಾನವಿಲ್ಲ. ಹಾಗೆಯೇ ವಿಲಿಯಮ್ಸನ್ ಸ್ಪಿನ್ ಬೌಲರ್ಗಳನ್ನು ಸಂಕಷ್ಟಕ್ಕೀಡು ಮಾಡುವ ಬ್ಯಾಟ್ಸ್ಮನ್. ಏಕೆಂದರೆ ಅವರು ತಂಬಾ ನಿಧಾನವಾಗಿ ಬ್ಯಾಟ್ ಬೀಸುತ್ತಾರೆ. ಅದರಲ್ಲೂ ನಿಧಾನಗತಿ ಪಿಚ್ನಲ್ಲಂತೂ ಅವರಿಗೆ ಬೌಲಿಂಗ್ ಮಾಡುವುದು ಕಷ್ಟ”ಎಂದು ಚಹಾಲ್ ತಿಳಿಸಿದ್ದಾರೆ.
ಇನ್ನು ಪಾಕಿಸ್ತಾನ ಅನುಭವಿ ಮಲಿಕ್ ಅವರನ್ನು ಕೂಡ ಆಯ್ಕೆ ಮಾಡಿದ್ದು, 2018ರ ಏಷ್ಯಾಕಪ್ನಲ್ಲಿ ಪಾಕಿಸ್ತಾನದ ಎಲ್ಲ ಬ್ಯಾಟ್ಸ್ಮನ್ಗಳು ಸ್ಪಿನ್ ಬೌಲಿಂಗ್ ರನ್ಗಳಿಸದೇ ವಿಕೆಟ್ ಒಪ್ಪಿಸಿದರೆ ಮಲಿಕ್ ಉತ್ತಮವಾಗಿ ಬ್ಯಾಟಿಂಗ್ ನಡೆಸಿದ್ದನ್ನು ಸ್ಮರಿಸಿದ್ದಾರೆ.
“ನಾನು ಶೋಯಬ್ ಮಲಿಕ್ಗೆ ಏಷ್ಯಾಕಪ್ ವೇಳೆ ಬೌಲಿಂಗ್ ಮಾಡಿದ್ದೆ, ಅವರು ತುಂಬಾ ಚೆನ್ನಾಗಿ ಬ್ಯಾಟಿಂಗ್ ನಡೆಸಿದ್ದರು. ಉತ್ತಮ ಎಸೆತಗಳಿಗೂ ಸಿಂಗಲ್ ತೆಗೆದುಕೊಳ್ಳುತ್ತಿದ್ದರು. ಈ ಅನುಭವಿ ಬ್ಯಾಟ್ಸ್ಮನ್ ಸ್ಟಿವ್ ಸ್ಮಿತ್ಗಿಂತಲೂ ತುಂಬಾ ಚೆನ್ನಾಗಿ ಸ್ಪಿನ್ ಬೌಲಿಂಗ್ಗೆ ಬ್ಯಾಟಿಂಗ್ ನಡೆಸುತ್ತಾರೆ ಎನಿಸಿತು”ಎಂದು ಚಹಾಲ್ ಹೇಳಿದ್ದಾರೆ.
ಕೊಹ್ಲಿ ಸೇರಿದಂತೆ ಹಲವು ದಿಗ್ಗಜರ ಪ್ರಕಾರ ಸ್ಮಿತ್ ವಿಶ್ವದ ಅತ್ಯುತ್ತಮ ಬ್ಯಾಟ್ಸ್ಮನ್ಗಳಲ್ಲಿ ಒಬ್ಬರು ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ ಸ್ಮಿತ್ ಸ್ಪಿನ್ ಬೌಲಿಂಗ್ ಆಡುವಂತಹ ಉತ್ತಮ ಬ್ಯಾಟ್ಸ್ಮನ್ ಅಲ್ಲ ಎನ್ನುವುದು ಚಹಾಲ್ ನಂಬಿಕೆಯಾಗಿದೆ.