ಲಾಹೋರ್(ಪಾಕಿಸ್ತಾನ): ಭಾರತ ಮತ್ತು ಪಾಕಿಸ್ತಾನ ನಡುವೆ ಬೇರೆಲ್ಲಾ ಕ್ರೀಡೆಗಳು ನಡೆಯುತ್ತಿರುವಾಗ ಕ್ರಿಕೆಟ್ ಮಾತ್ರ ಏಕೆ ಸಾಧ್ಯವಿಲ್ಲ ಎಂದು ಪಾಕಿಸ್ತಾನದ ಮಾಜಿ ವೇಗಿ ಶೋಯಬ್ ಅಖ್ತರ್ ಪ್ರಶ್ನಿಸಿದ್ದಾರೆ.
ಭಾರತ ಮತ್ತು ಪಾಕಿಸ್ತಾನ ನಡುವೆ ತಟಸ್ಥ ಸ್ಥಳದಲ್ಲಿ ಇತ್ತೀಚೆಗೆ ಡೇವಿಸ್ ಕಪ್ ಟೆನ್ನಿಸ್ ನಡೆದಿತ್ತು. ಇನ್ನು ಮೊನ್ನೆಯಷ್ಟೇ ಅನಧಿಕೃತ ಭಾರತ ತಂಡ ಕಬಡ್ಡಿ ವಿಶ್ವಚಾಂಪಿಯನ್ಶಿಪ್ನಲ್ಲಿ ಪಾಲ್ಗೊಂಡು ಬಂದಿದೆ. ಇದಕ್ಕೆ ತಮ್ಮ ಯೂಟ್ಯೂಬ್ ಚಾನೆಲ್ನಲ್ಲಿ ಮಾತನಾಡಿರುವ ಅವರು ಕ್ರಿಕೆಟ್ಗೆ ಮಾತ್ರ ಯಾಕೆ ಈ ದಿಗ್ಭಂಧನ ಎಂದಿದ್ದಾರೆ.
ರಾಜಕೀಯ ಕಾರಣದಿಂದ ಭಾರತ ಪಾಕಿಸ್ತಾನಕ್ಕೆ ಬರುವುದಿಲ್ಲ, ಇತ್ತ ಪಾಕಿಸ್ತಾನ ತಂಡ ಕೂಡ ಭಾರತಕ್ಕೆ ಹೋಗುವುದಿಲ್ಲ ಸರಿ. ಆದರೆ, ಏಷ್ಯಾ ಕಪ್, ಚಾಂಪಿಯನ್ಸ್ ಟ್ರೋಫಿಯಂತಹ ಐಸಿಸಿ ಟೂರ್ನಿಗಳಲ್ಲಿ ತಟಸ್ಥ ಅಂಗಣದಲ್ಲಿ ಆಡುತ್ತಿದ್ದಾರಲ್ಲವೆ, ಅದರಂತೆಯೇ ಎರಡು ತಂಡಗಳ ನಡುವೆ ದ್ವಿಪಕ್ಷೀಯ ಸರಣಿಗಳನ್ನೂ ತಟಸ್ಥ ಸ್ಥಳದಲ್ಲೇ ನಡೆಸಬಹುದಲ್ವಾ ಎಂದು ತಿಳಿಸಿದ್ದಾರೆ.
ವಾರದ ಹಿಂದೆಯಷ್ಟೇ ಭಾರತ ತಂಡದ ಮಾಜಿ ಆಲ್ರೌಂಡರ್ ಯುವರಾಜ್ ಸಿಂಗ್, ಪಾಕಿಸ್ತಾನದ ಶಾಹಿದ್ ಆಫ್ರಿದಿ ಕೂಡ ಎರಡೂ ರಾಷ್ಟ್ರಗಳ ನಡುವೆ ದ್ವಿಪಕ್ಷೀಯ ಸರಣಿ ನಡೆಯಬೇಕು ಎಂದಿದ್ದರು. ಇದೀಗ ಅಖ್ತರ್ ಕೂಡ ಮತ್ತೆ ಕ್ರಿಕೆಟ್ ನಂಟನ್ನು ಬೆಳೆಸಲು ಕೇಳಿಕೊಂಡಿದ್ದಾರೆ.
ಪಾಕಿಸ್ತಾನ ತಂಡ 2012-13 ರಲ್ಲಿ ಕೊನೆಯ ಬಾರಿ ಭಾರತದ ವಿರುದ್ಧ ಏಕದಿನ ಸರಣಿಯಾಡಿತ್ತು. ಇನ್ನು 2007-08ರಲ್ಲಿ ಟೆಸ್ಟ್ ಸರಣಿಯಲ್ಲಿ ಮುಖಾಮುಖಿಯಾಗಿದ್ದವು. ಈ ಎರಡು ಸರಣಿಗಳ ಆತಿಥ್ಯವನ್ನು ಭಾರತವೇ ವಹಿಸಿತ್ತು.