ಹೈದರಾಬಾದ್: ನಾನು ಹಾರ್ದಿಕ್ ಪಾಂಡ್ಯ ಅವರ ಸ್ಥಾನವನ್ನು ತುಂಬಲು ಬಂದಿಲ್ಲ, ದೇಶಕ್ಕಾಗಿ ಆಡಲು ಬಂದಿದ್ದೇನೆ ಎಂದು ಟೀಂ ಇಂಡಿಯಾದ ಯುವ ಆಲ್ರೌಂಡ್ ಆಟಗಾರ ಶಿವಂ ದುಬೆ ಹೇಳಿದ್ದಾರೆ.
ಹಾರ್ದಿಕ್ ಪಾಂಡ್ಯ ಗಾಯದ ಸಮಸ್ಯೆಯಿಂದ ಬಳಲುತ್ತಿರುವುದರಿಂದ ಶಸ್ತ್ರಚಿಕಿತ್ಸೆಗೆ ಒಳಪಡಲಿದ್ದಾರೆ. ಹೀಗಾಗಿ ಪಾಂಡ್ಯ ಬದಲಿಗೆ ಶಿವಂ ದುಬೆ ಟಿ-20 ಟೂರ್ನಿಗೆ ಆಯ್ಕೆಯಾಗಿದ್ದಾರೆ. ಬಾಂಗ್ಲಾ ವಿರುದ್ಧದ ಅಂತಿಮ ಟಿ-20 ಪಂದ್ಯದಲ್ಲಿ ಮಿಂಚಿದ್ದ ದುಬೆ, 3 ವಿಕೆಟ್ ಪಡೆದುಕೊಂಡಿದ್ದರು. ಇದೀಗ ವಿಂಡೀಸ್ ವಿರುದ್ಧದ ಟೂರ್ನಿಗೂ ಶಿವಂ ಅವರನ್ನ ಆಯ್ಕೆ ಮಾಡಲಾಗಿದೆ.
ತಮ್ಮ ಕ್ರಿಕೆಟ್ ಭವಿಷ್ಯದ ಬಗ್ಗೆ ಮಾತನಾಡಿರುವ ದುಬೆ 'ಹಾರ್ದಿಕ್ ಅವರನ್ನ ರೀಪ್ಲೇಸ್ ಮಾಡುವ ಅವಕಾಶ ಅಂತ ನಾನು ತಿಳಿದುಕೊಂಡಿಲ್ಲ. ದೇಶಕ್ಕಾಗಿ ಆಡುವ ಅವಕಾಶ ಸಿಕ್ಕಿದೆ. ನನ್ನ ಕೈಲಾದಷ್ಟು ಉತ್ತಮ ಪ್ರದರ್ಶನ ನೀಡುತ್ತೇನೆ' ಎಂದಿದ್ದಾರೆ. ಅಲ್ಲದೆ ತಂಡದ ನಾಯಕ ವಿರಾಟ್ ಮತ್ತು ಆಡಳಿತ ಮಂಡಳಿ ಉತ್ತಮವಾಗಿ ಪ್ರೋತ್ಸಾಹ ನೀಡುತ್ತಿದ್ದಾರೆ ಎಂದಿದ್ದಾರೆ.
ಒಬ್ಬ ಆಲ್ರೌಂಡರ್ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡನ್ನೂ ಮಾಡಬೇಕಿದೆ, ಹೀಗಾಗಿ ದೈಹಿಕ ಸಾಮರ್ಥ್ಯ ಕಾಪಾಡಿಕೊಳ್ಳುವುದು ಸವಾಲಿನ ಕೆಲಸ. ನಾನು ಆ ಬಗ್ಗೆ ಹೆಚ್ಚಿನ ಗಮನ ನೀಡುತ್ತಿದ್ದೇನೆ ಎಂದಿದ್ದಾರೆ.