ನವದೆಹಲಿ:ಟೀಂ ಇಂಡಿಯಾ ಆರಂಭಿಕ ಎಡಗೈ ಬ್ಯಾಟ್ಸ್ಮನ್ ಶಿಖರ್ ಧವನ್ ತಂದೆ-ತಾಯಿ ಆಶೀರ್ವಾದ ಪಡೆದು ದುಬೈ ಪಯಣಕ್ಕೆ ಅಣಿಯಾದರು.
ಡೆಲ್ಲಿ ಕ್ಯಾಪಿಟಲ್ ತಂಡದಲ್ಲಿ ಆಡುತ್ತಿರುವ ಧವನ್ ಎರಡು ತಿಂಗಳ ಐಪಿಎಲ್ ಟೂರ್ನಿಯಲ್ಲಿ ಭಾಗಿಯಾಗಲು ತಂಡದೊಂದಿಗೆ ವಿದೇಶಕ್ಕೆ ಪ್ರಯಾಣ ಕೈಗೊಳ್ಳಲಿದ್ದಾರೆ. ಇವತ್ತು ತಂದೆ-ತಾಯಿ ಬಳಿ ತೆರಳಿದ ಅವರು ಆಶೀರ್ವಾದ ಪಡೆದುಕೊಂಡಿದ್ದು, ಫೋಟೊವನ್ನು ಟ್ವಿಟರ್ನಲ್ಲಿ ಹಂಚಿಕೊಂಡಿದ್ದಾರೆ.
ಹೆತ್ತವರ ಪ್ರೀತಿಯ ಮುಂದೆ ಯಾವುದೇ ಪ್ರೀತಿ ದೊಡ್ಡದಲ್ಲ. ಸುದೀರ್ಘ ಪ್ರವಾಸ ಬೆಳೆಸುವುದಕ್ಕೂ ಮುಂಚಿತವಾಗಿ ಹೆತ್ತವರಿಂದ ಆಶೀರ್ವಾದ ಮತ್ತು ಶುಭಾಶಯ ಪಡೆಯಲು ಬಂದಿದ್ದೇನೆ. ಅವರು ಈಗಲೂ ನನ್ನನ್ನು ಮಗುವಿನಂತೆ ನೋಡುತ್ತಾರೆ. ಪೋಷಕರ ಪ್ರೀತಿಯ ಮುಂದೆ ನನಗೆ ಯಾವುದೂ ದೊಡ್ಡದಲ್ಲ ಎಂದಿದ್ದಾರೆ.
ಯುವ ಪಡೆಯಿಂದ ಕೂಡಿರುವ ಡೆಲ್ಲಿ ತಂಡದಲ್ಲಿ ಶ್ರೇಯಸ್ ಅಯ್ಯರ್, ಶಿಖರ್ ಧವನ್, ಪೃಥ್ವಿ ಶಾ, ರಿಷಭ್ ಪಂತ್ ಸೇರಿದಂತೆ ಅನೇಕರಿದ್ದು, ಮುಂದಿನ ಎರಡು ದಿನಗಳಲ್ಲಿ ಪ್ರಯಾಣ ಬೆಳೆಸುವ ಸಾಧ್ಯತೆ ಇದೆ. 53 ದಿನಗಳ ಕಾಲ ನಡೆಯಲಿರುವ ಹೊಡಿಬಡಿ ಆಟ ಸೆಪ್ಟೆಂಬರ್ 19ರಿಂದ ಆರಂಭಗೊಂಡು, ನವೆಂಬರ್ 10ರಂದು ಮುಕ್ತಾಯಗೊಳ್ಳಲಿದೆ.