ನವದೆಹಲಿ :ಭಾರತ ತಂಡದ ಸ್ಟಾರ್ ಬ್ಯಾಟ್ಸ್ಮನ್ ಶಿಖರ್ ಧವನ್ರನ್ನು ಗಬ್ಬರ್ ಸಿಂಗ್ ಎಂದು ಅಡ್ಡ ಹೆಸರಿನಿಂದ ಕರೆಯಲಾಗುತ್ತದೆ. ಆದರೆ, ಅವರಿಗೆ ಆ ಹೆಸರು ಹೇಗೆ ಬಂತು, ಯಾರು ಇಟ್ಟವರು ಎಂದು ಸ್ವತಃ ಧವನ್ ಬಹಿರಂಗಪಡಿಸಿದ್ದಾರೆ.
ಭಾರತ ತಂಡದ ಆರಂಭಿಕ ಬ್ಯಾಟ್ಸ್ಮನ್ ಕ್ರಿಕೆಟ್ ಮೈದಾನದಲ್ಲಷ್ಟೇ ಅಲ್ಲ, ಮೈದಾನದ ಹೊರಗೂ ಸಖತ್ ಎಂಜಾಯ್ ಮಾಡುವ ವ್ಯಕ್ತಿತ್ವ ಹೊಂದಿದ್ದಾರೆ. ಸದಾ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿರುವ ಅವರು, ಇಂದು ತಮ್ಮ ಟ್ವಿಟರ್ನಲ್ಲಿ ಅಭಿಮಾನಿಗಳ ಪ್ರಶ್ನೆಗಳಿಗೆ ಉತ್ತರಿಸುವ ಸಲುವಾಗಿ #AskShikhar ಎಂಬ ಟ್ಯಾಗ್ಲೈನ್ನೊಡನೆ ಪ್ರಶ್ನೋತ್ತರ ಅಭಿಯಾನ ನಡೆಸಿದ್ದಾರೆ.
ಈ ವೇಳೆ ಅಭಿಯಾನಿಯೊಬ್ಬ ನಿಮಗೆ ಗಬ್ಬರ್ ಎಂದು ನಾಮಕರಣ ಮಾಡಿದವರು ಯಾರು? ಎಂದು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿರುವ ಧವನ್, ವಿಜಯ್ ದಾಹಿಯ, ದೆಹಲಿ ತಂಡದ ರಣಜಿ ತಂಡದ ಕೋಚ್ ಎಂದು ಬಹಿರಂಗಪಡಿಸಿದ್ದಾರೆ.
'ಇದೊಂದು ತಮಾಷೆಯ ಕಥೆಯಾಗಿದೆ. ತಾನು ರಣಜಿ ಕ್ರಿಕೆಟ್ ಆಡುತ್ತಿದ್ದ ವೇಳೆ ಶೋಲೆ ಸಿನಿಮಾದ ಗಬ್ಬರ್ ಸಿಂಗ್ ಅವರ ಡೈಲಾಗ್ಗಳನ್ನು ಹೇಳುತ್ತಿದ್ದೆ. ನನ್ನ ಸುತ್ತ ಇರುವವರನ್ನು ಮನರಂಜಿಸುವುದು ನನ್ನ ಉದ್ದೇಶವಾಗಿತ್ತು. ಅದಕ್ಕಾಗಿ ನನಗೆ ವಿಜಯ್ ದಾಹಿಯಾ ಬಾಯ್, ಆ ಹೆಸರನ್ನೇ ನನಗೆ ನಾಮಕರಣ ಮಾಡಿದರು' ಎಂದು ಧವನ್ ತಿಳಿಸಿದ್ದಾರೆ.
ಇನ್ನು, ನಿಮ್ಮ ನೆಚ್ಚಿನ ಸ್ಟೇಡಿಯಂ ಯಾವುದು ಎಂದು ಕೇಳಿದ್ದಕ್ಕೆ, ಪದಾರ್ಪಣೆ ಮಾಡಿದ ಮೊಹಾಲಿ ಸ್ಟೇಡಿಯಂ ಎಂದು ಉತ್ತರಿಸಿದ್ದಾರೆ. ಧವನ್ ಮೊಹಾಲಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ ತಮ್ಮ ಮೊದಲ ಪಂದ್ಯದಲ್ಲೇ ಆಕರ್ಷಕ 187 ರನ್ ಸಿಡಿಸಿದ್ದರು. ಮತ್ತೊಬ್ಬ ಅಭಿಮಾನಿ ನಿಮ್ಮ ಮಗ ಜೊರೋವರ್ ಅವರ ನೆಚ್ಚಿನ ಕ್ರಿಕೆಟಿಗ ಯಾರು ಎಂದು ಕೇಳಿದ್ದಕ್ಕೆ, ಜೊರೋವರ್ ರೋಹಿತ್ ಶರ್ಮಾರನ್ನು ತುಂಬಾ ಇಷ್ಟಪಡುತ್ತಾನೆ ಎಂದು ತಿಳಿಸಿದ್ದಾರೆ.
ಹೀಗೆ ಹಲವಾರು ವಿಚಾರಗಳ ಬಗ್ಗೆ ಧವನ್ ಅಭಿಮಾನಿಗಳೊಂದಿಗೆ ಚರ್ಚಿಸಿದ್ದು, ಅಭಿಮಾನಿಗಳು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ.