ದುಬೈ: ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಗೆ ಮೊದಲ ಬಾರಿಗೆ ಅವಿರೋಧವಾಗಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದ ಶಶಾಂಕ್ ಮನೋಹರ್ ಅವರ ಅಧಿಕಾರಾವಧಿ ಬುಧವಾರಕ್ಕೆ ಕೊನೆಗೊಂಡಿದೆ. ಮನೋಹರ್ ಮರು ಆಯ್ಕೆಯಾಗಲು ಇಷ್ಟಪಡದ ಕಾರಣ ಐಸಿಸಿಗೆ ಹಂಗಾಮಿ ಅಧ್ಯಕ್ಷರನ್ನು ನೇಮಿಸಲಾಗಿದೆ.
ಮುಂದಿನ ಐಸಿಸಿ ಸಭೆಯಲ್ಲಿ ಹೊಸ ಅಧ್ಯಕ್ಷರ ಆಯ್ಕೆಗೆ ಸಂಬಂಧಿಸಿ ಚರ್ಚೆ ನಡೆಯಲಿದೆ. ಮಾಧ್ಯಮ ವರದಿಯೊಂದರ ಪ್ರಕಾರ, ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಬೋರ್ಡ್ (ಇಸಿಬಿ) ಮುಖ್ಯಸ್ಥ ಕಾಲಿನ್ ಗ್ರೇವ್ಸ್ ತೆರವಾದ ಸ್ಥಾನ ತುಂಬಲಿದ್ದಾರೆ ಎನ್ನಲಾಗ್ತಿದೆ. ಸದ್ಯಕ್ಕೆ ಉಪಾಧ್ಯಕ್ಷ ಇಮ್ರಾನ್ ಖ್ವಾಜಾ ಐಸಿಸಿಯ ಹಂಗಾಮಿ ಅಧ್ಯಕ್ಷರಾಗಿ ನೇಮಕಗೊಂಡಿದ್ದಾರೆ.
ಐಸಿಸಿ ಅಧ್ಯಕ್ಷರ ಚುನಾವಣೆಗೆ ಸಂಬಂಧಿಸಿದಂತೆ ಯಾವುದೇ ಅಂತಿಮ ನಿರ್ಧಾರವನ್ನು ಸದ್ಯಕ್ಕೆ ತೆಗೆದುಕೊಂಡಿಲ್ಲ. ಈ ಬಗ್ಗೆ ಮುಂದಿನ ಐಸಿಸಿ ಬೋರ್ಡ್ ಮೀಟಿಂಗ್‌ನಲ್ಲಿ ಚರ್ಚಿಸಲಾಗುತ್ತದೆ, ಅಲ್ಲಿಯವರೆಗೆ ಇಮ್ರಾನ್ ಅವರು ಹಂಗಾಮಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಲಿದ್ದಾರೆ ಎಂದು ಐಸಿಸಿ ಪ್ರಕಟಣೆ ಹೊರಡಿಸಿದೆ.
ಐಸಿಸಿ ಅಧ್ಯಕ್ಷ ಹುದ್ದೆಯನ್ನು ಮೂರು ಅವಧಿಗೆ ಅಲಂಕರಿಸುವ ಅವಕಾಶವಿದ್ದು, ಮನೋಹರ್ಗೆ ಇನ್ನೂ ಎರಡು ವರ್ಷಗಳ ಕಾಲ ಅಧ್ಯಕ್ಷರಾಗಿ ಮುಂದುವರಿಯುವ ಅವಕಾಶವಿತ್ತು. ಆದರೆ ನನಗೆ ಅಧ್ಯಕ್ಷನಾಗಿ ಮುಂದುವರಿಯಲು ಆಸಕ್ತಿಯಿಲ್ಲ ಎಂದು ಮನೋಹರ್ ಕಳೆದ ಡಿಸೆಂಬರ್ನಲ್ಲೇ ತಿಳಿಸಿದ್ದರು. ಹಾಗಾಗಿ ಅವರ ಅಧಿಕಾರಾವಧಿ ಮೇ ನಲ್ಲೇ ಅಂತ್ಯಗೊಂಡಿತ್ತು.
ಶಶಾಂಕ್ ಮನೋಹರ್ 2016ರಲ್ಲಿ ಐಸಿಸಿ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದರು. ನೂತನ ಅಧ್ಯಕ್ಷರ ಆಯ್ಕೆ ಚುನಾವಣೆಗೆ ಮುಂದಿನ ವಾರದೊಳಗೆ ಐಸಿಸಿ ಮಂಡಳಿ ಅನುಮೋದನೆ ನೀಡುವ ನಿರೀಕ್ಷೆಯಿದೆ.