ಸಿಡ್ನಿ:ಭಾರತ ಕ್ರಿಕೆಟ್ ನಿರ್ವಹಣ ಮಂಡಳಿ ಮೂರನೇ ಟೆಸ್ಟ್ಗೆ ಮೂರನೇ ವೇಗಿಯಾಗಿ ಸೈನಿ ಅಥವಾ ಶಾರ್ದುಲ್ರನ್ನು ಕಣಕ್ಕಿಳಿಸಬೇಕೇ ಎನ್ನುವ ಲೆಕ್ಕಾಚಾರದಲ್ಲಿದೆ. ಆದರೆ ಗುರುವಾರದಿಂದ ಆರಂಭವಾಗಲಿರುವ ಪಂದ್ಯದಲ್ಲಿ ಮಯಾಂಕ್ ಬದಲಿಗೆ ರೋಹಿತ್ ಶರ್ಮಾ ಕಣಕ್ಕಿಳಿಯುವುದು ಬಹುತೇಕ ಖಚಿತವಾಗಿದೆ.
ಮಯಾಂಕ್ ಅಗರ್ವಾಲ್ ಕಳೆದ 8 ಇನ್ನಿಂಗ್ಸ್ಗಳಲ್ಲಿ 7ರಲ್ಲಿ ವಿಫಲರಾಗಿದ್ದಾರೆ. ಹಾಗಾಗಿ ಅವರನ್ನು ಆಸೀಸ್ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದಿಂದ ಹೊರಗಿಡುವುದರಲ್ಲಿ ಯಾವುದೇ ಸಮಸ್ಯೆ ಕಂಡುಬರುತ್ತಿಲ್ಲ. ಆದರೆ ಗಾಯಗೊಂಡಿರುವ ಉಮೇಶ್ ಯಾದವ್ ಜಾಗವನ್ನು ಯಾರು ತುಂಬಲಿದ್ದಾರೆ ಎಂದು ಅಂದಾಜಿಸುವುದು ನಿಜಕ್ಕೂ ಮ್ಯಾನೇಜ್ಮೆಂಟ್ಗೆ ಸವಾಲಾಗಿದೆ.
ಮುಂಬೈ ಸೀಮರ್ ಮತ್ತು ಕೆಳ ಕ್ರಮಾಂಕದಲ್ಲಿ ಉಪಯುಕ್ತ ಬ್ಯಾಟ್ಸ್‌ಮನ್ ಆಗಿರುವ ಶಾರ್ದುಲ್ ಠಾಕೂರ್ ಅವರನ್ನು ಉಮೇಶ್ ಯಾದವ್ ಸ್ಥಾನಕ್ಕೆ ಸೂಕ್ತ ಎಂದು ಪರಿಗಣಿಸಲಾಗಿತ್ತು. ಆದರೆ ಕೆಲವು ಹಿರಿಯ ಆಟಗಾರರು, ಭಾರತ ತಂಡದ ಅತಿ ವೇಗದ ಬೌಲರ್ ಎನಿಸಿಕೊಂಡಿರುವ ಸೈನಿಯನ್ನು ಆಸ್ಟ್ರೇಲಿಯಾ ಬ್ಯಾಟಿಂಗ್ ಕ್ರಮಾಂಕವನ್ನು ಅಸ್ಥಿರಗೊಳಿಸಲು ಬಳಸಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ.
ಇದನ್ನು ಓದಿ:ತಂಡಕ್ಕೆ ಮರಳಿರುವ ರೋಹಿತ್ರಿಂದ ಸಿಡ್ನಿಯಲ್ಲಿ ಶತಕ ನಿರೀಕ್ಷಿಸುತ್ತಿದ್ದೇನೆ: ಲಕ್ಷ್ಮಣ್
ಮೂರನೇ ವೇಗಿ ಆಯ್ಕೆಯ ನಿರ್ಧಾರವು ಪ್ರಾಥಮಿಕವಾಗಿ ವಿಳಂಬವಾಗಿದೆ. ಏಕೆಂದರೆ ಮಂಗಳವಾರ ಸಿಡ್ನಿಯಲ್ಲಿ ಮೋಡ ಕವಿದ ವಾತಾವರಣವಿದ್ದಿದ್ದರಿಂದ ಎಸ್ಸಿಜಿ ಪಿಚ್ ಮುಚ್ಚಲಾಗಿತ್ತು. ಬುಧವಾರ ಅಲ್ಲಿನ ವಾತಾವರಣವನ್ನು ನೋಡಿ ಯಾರಿಗೆ ಅಲ್ಲಿ ಅನುಕೂಲವಾಗಬಹುದು ಎಂಬುದನ್ನು ಅಂದಾಜು ಮಾಡಬಹುದು. ವಾತಾವರಣದಲ್ಲಿ ತೇವಾಂಶ ಕಂಡುಬಂದರೆ ಶಾರ್ದುಲ್ ಠಾಕೂರ್ಗೆ ಅವಕಾಶ ನೀಡಬಹುದು. ಒಂದು ವೇಳೆ ಪಿಚ್ ಫ್ಲಾಟ್ ಆಗಿದ್ದರೆ ಸೈನಿಗೆ ಅವಕಾಶ ನೀಡಬಹುದು ಎನ್ನಲಾಗುತ್ತಿದೆ.
ಯಾರ್ಕರ್ ಕಿಂಗ್ ನಟರಾಜನ್ ಹೆಸರು ಕೇಳಿಬರುತ್ತಿದೆಯಾದರೂ ಅವರಿಗೆ ಹೆಚ್ಚಿನ ಪ್ರಥಮ ದರ್ಜೆ ಕ್ರಿಕೆಟ್ ಆಡಿದ ಅನುಭವವಿಲ್ಲ. ಅವರು ಕೇವಲ ಒಂದೇ ಒಂದು ರಣಜಿ ಪಂದ್ಯವನ್ನಾಡಿದ್ದಾರೆ. ಅವರು ಈ ಪಂದ್ಯದಲ್ಲಿ 11 ಓವರ್ ಬೌಲಿಂಗ್ ಮಾಡಿ 3 ವಿಕೆಟ್ ಪಡೆದಿದ್ದರು. ಹಾಗಾಗಿ ಇವರ ಆಯ್ಕೆ ಸಾಧ್ಯತೆ ಬಹುತೇಕ ಕಡಿಮೆಯಾಗಿದೆ.
ಸಂಭಾವ್ಯ ಭಾರತ ತಂಡ: ರೋಹಿತ್ ಶರ್ಮಾ, ಶುಬ್ಮನ್ ಗಿಲ್, ಚೇತೇಶ್ವರ್ ಪೂಜಾರ, ಅಜಿಂಕ್ಯ ರಹಾನೆ(ನಾಯಕ), ಹನುಮ ವಿಹಾರಿ, ರಿಷಭ್ ಪಂತ್, ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್, ಮೊಹಮ್ಮದ್ ಸಿರಾಜ್, ಜಸ್ಪ್ರೀತ್ ಬುಮ್ರಾ, ಶಾರ್ದುಲ್ ಠಾಕೂರ್/ನವದೀಪ್ ಸೈನಿ.