ದುಬೈ:ಡೆಲ್ಲಿ ವಿರುದ್ಧದ ಪಂದ್ಯಕ್ಕೆ ಎರಡು ದಿನಗಳಿಗೂ ಮುನ್ನ ಸಿಎಸ್ಕೆ ಬ್ಯಾಟ್ಸ್ಮನ್ ಶೇನ್ ವಾಟ್ಸನ್ ಅವರ ಅಜ್ಜಿ ತೀರಿಕೊಂಡ ವಿಷಯ ಹಂಚಿಕೊಂಡಿದ್ದು, ತಾವು ಈ ಕಠಿಣ ಸಂದರ್ಭದಲ್ಲಿ ಕುಟುಂಬದ ಜೊತೆಯಿರಲು ಸಾಧ್ಯವಾಗದಿರುವುದಕ್ಕೆ ಕ್ಷಮೆ ಕೋರಿದ್ದಾರೆ. 2018ರಲ್ಲಿ ಸಿಎಸ್ಕೆಗೆ ಟ್ರೋಫಿ ತಂದುಕೊಡಲು ಪ್ರಮುಖ ಪಾತ್ರವಹಿಸಿದ್ದ ಶೇನ್ ವಾಟ್ಸನ್, 2019ರಲ್ಲಿ ಸರಾಸರಿ ಬ್ಯಾಟಿಂಗ್ ಪ್ರದರ್ಶನ ತೋರಿದ್ದರು. ಆದರೆ, 2020ರಲ್ಲಿ ತಮ್ಮ ಆಡಿದ ಮೂರು ಪಂದ್ಯಗಳಲ್ಲೂ 4, 33 ಹಾಗೂ 14 ರನ್ಗಳಿಸಿ ಲಯಕ್ಕೆ ಮರಳಲು ವಿಫಲರಾಗಿದ್ದಾರೆ.
ಆದರೆ, ಡೆಲ್ಲಿ ವಿರುದ್ಧದ ಪಂದ್ಯಕ್ಕೆ ಎರಡು ದಿನಗಳಿರುವಾಗ ವಾಟ್ಸನ್ಗೆ ಅಘಾತಕಾರಿ ಸುದ್ದಿಯೊಂದು ಮನಸ್ಸಿಗೆ ನೋವುಂಟು ಮಾಡಿರುವುದಾಗಿ ಇದೀಗ ಬೆಳಕಿಗೆ ಬಂದಿದೆ. ಅದೇನೆಂದ್ರೆ ವಾಟ್ಸನ್ ಡೆಲ್ಲಿ ವಿರುದ್ಧದ ಪಂದ್ಯಕ್ಕೆ ಪಾಲ್ಗೊಳ್ಳುವ ಮುನ್ನ, ಅವರ ಅಜ್ಜಿ ನಿಧನರಾದ ಸುದ್ದಿ ತಿಳಿದಿತ್ತು. ಆದರೆ, ಅವರು ತಂಡದ ಹಿತಕ್ಕೋಸ್ಕರ ಮೈದಾನಕ್ಕಿಳಿದರಾದರೂ ಉತ್ತಮ ರನ್ಗಳಿಸಲಾಗಲಿಲ್ಲ. ಅವರು ಕೇವಲ 14 ರನ್ಗಳಿಸಿ ಔಟಾದರು.
"ನನ್ನ ಪ್ರೀತಿಯನ್ನು ಮನಯಲ್ಲಿರುವ ನನ್ನ ಕುಟುಂಬಕ್ಕೆ ಕಹುಹಿಸಲು ಬಯಸುತ್ತೇನೆ ಮತ್ತು ನನ್ನ ಅಮ್ಮನಿಗೆ ಅಜ್ಜಿ ನಂಬಲಾಸಾಧ್ಯವಾದ ತಾಯಿಯಾಗಿದ್ದಳು ಎಂದು ನನಗೆ ತಿಳಿದಿದೆ. ನಾನು ಅಲ್ಲಿರಲು ಸಾಧ್ಯವಾಗದಿರುವುದಕ್ಕೆ ನನ್ನನ್ನು ಕ್ಷಮಿಸಿ. ಆದರೆ, ನನ್ನ ಹೃದಯ ಈ ಸಂದರ್ಭದಲ್ಲಿ ನನ್ನ ಕುಟುಂಬದ ಜೊತೆಯಿರುತ್ತದೆ" ಎಂದು ನೋವಿನಿಂದ ಹೇಳಿಕೊಂಡಿದ್ದಾರೆ. ಇದೇ ಸಂದರ್ಭದಲ್ಲಿ ತೀವ್ರ ಹೃದಯಾಘಾತದಿಂದ ಮುಂಬೈನಲ್ಲಿ ನಿಧನರಾಗಿದ್ದ ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಹಾಗೂ ಕಾಮೆಂಟೇಟರ್ ಡೀನ್ ಜೋನ್ಸ್ ಅವರಿಗೂ ಸಂತಾಪ ಸೂಚಿಸಿದ್ದಾರೆ.
ವಾಟ್ಸನ್ ತಮ್ಮ ಕುಟುಂಬದಲ್ಲಿ ಸಾವಾಗಿದ್ದರೂ ಪಂದ್ಯದಲ್ಲಿ ಆಡುವ ಮನಸ್ಸು ಮಾಡಿದ ನಿರ್ಧಾರಕ್ಕೆ ಆಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 2019ರ ಫೈನಲ್ ಪಂದ್ಯದಲ್ಲಿ ಮಂಡಿಯಲ್ಲಿ ಗಾಯವಾಗಿ ರಕ್ತ ಸೋರುತ್ತಿದ್ದರೂ ತಂಡವನ್ನು ಗೆಲ್ಲಿಸುವುದಕ್ಕಾಗಿ ಆಡಿ ಕ್ರಿಕೆಟ್ ಅಭಿಮಾನಿಗಳ ಮನಗೆದ್ದಿದ್ದರು. ಆದರೆ, ಇವರ ಶ್ರಮದ ಹೊರೆತಾಗಿಯೂ ಚೆನ್ನೈ 1 ರನ್ನಿಂದ ಸೋಲು ಕಂಡಿತ್ತು. ಆ ಪಂದ್ಯದಲ್ಲಿ ವಾಟ್ಸನ್ 59 ಎಸೆತಗಳಲ್ಲಿ 80 ರನ್ಗಳಿಸಿದ್ದರು.