ಸೌತಾಂಪ್ಟನ್:ಪಾಕಿಸ್ತಾನದ ವಿರುದ್ಧದ ಪಂದ್ಯದ ವೇಳೆ 600 ವಿಕೆಟ್ ಸಾಧನೆ ಮಾಡಿರುವ ಇಂಗ್ಲೆಂಡ್ ವೇಗಿ ಜೇಮ್ಸ್ ಆ್ಯಂಡರ್ಸನ್ ಅವರನ್ನು ವಿದೇಶಗಳಲ್ಲಿ ನಡೆಯುವ ಟೂರ್ನಿಗಳಿಗೆ ಬೌಲಿಂಗ್ ಕೋಚ್ ಆಗಿ ಬಳಸಬಹುದು ಎಂದು ಆಂಗ್ಲರಿಗೆ ಆಸ್ಟ್ರೇಲಿಯಾದ ಮಾಜಿ ಬೌಲರ್ ಶೇನ್ ವಾರ್ನ್ ಸಲಹೆ ನೀಡಿದ್ದಾರೆ.
ಮಂಗಳವಾರ ಜೇಮ್ಸ್ ಆ್ಯಂಡರ್ಸನ್ ಪಾಕಿಸ್ತಾನ ತಂಡದ ನಾಯಕ ಅಜರ್ ಅಲಿ ಅವರ ವಿಕೆಟ್ ಪಡೆಯುವ ಮೂಲಕ ಟೆಸ್ಟ್ ಇತಿಹಾಸದಲ್ಲಿ 600 ವಿಕೆಟ್ ಪಡೆದ ಮೊದಲ ವೇಗದ ಬೌಲರ್ ಎನಿಸಿಕೊಂಡರು. ಈ ಸಾಧನೆಗೆ ಪಾತ್ರರಾದ ಬೆನ್ನಲ್ಲೇ ಆಸೀಸ್ ಲೆಜೆಂಡ್ ಆ್ಯಂಡರ್ಸನ್ ಅವರನ್ನು ಸ್ವದೇಶದಲ್ಲಿ ಬೌಲರ್ ಆಗಿ, ವಿದೇಶಿ ಟೂರ್ನಿಗಳಲ್ಲಿ ಕೋಚ್ ಆಗಿ ಬಳಸಿಕೊಳ್ಳುವುದರಿಂದ ತಂಡಕ್ಕೆ ಹೆಚ್ಚಿನ ಅನುಕೂಲವಾಗಲಿದೆ ಎಂದು ಹೇಳಿದ್ದಾರೆ.
ಜೇಮ್ಸ್ ಆ್ಯಂಡರ್ಸನ್ ಅವರ ಬೌಲಿಂಗ್ ನೋಡುವುದೇ ಅದ್ಭುತ. 38ರ ಹರೆಯದಲ್ಲೂ ಹೇಗೆ ಹೊರಹೊಮ್ಮುತ್ತಾರೆ ಎಂಬುದನ್ನು ನೋಡಲು ನನಗೆ ಆಸಕ್ತಿ ಇದೆ ಎಂದು ವಾರ್ನ್ ಹೇಳಿದ್ದಾರೆ.
"ಜಿಮ್ಮಿಯವರನ್ನು ಎಲ್ಲಿಯವರೆಗೆ ಸಾಧ್ಯವೋ ಅಲ್ಲಿಯವರೆಗೆ ಆಡಿಸಬೇಕೆಂದುಕೊಂಡಿದ್ದರೆ ಅವರನ್ನು ವಿದೇಶಿ ಟೂರ್ನಿಗಳಿಗೆ ಬೌಲಿಂಗ್ ಕೋಚ್ ಆಗಿ ಬಳಸಿಕೊಳ್ಳಬಹುದಲ್ಲವೇ?. ಏಕೆಂದರೆ ಅವರು ಮುಂದಿನ ಮೂರು ನಾಲ್ಕು ವರ್ಷಗಳ ಕಾಲ ಆಡುವುದು ವಿಸ್ಮಯ ಎಂದು ಹೇಳುತ್ತಾರೆ. ಆದರೆ ಇಂಗ್ಲೆಂಡ್ ನಲ್ಲಿ ಅವರು ತಂಡದ ಪ್ರಧಾನ ಬೌಲರ್ ಆಗಿದ್ದಾರೆ. ಆದ್ದರಿಂದ ಅವರನ್ನು ತವರಿನ ಸರಣಿಯಲ್ಲಿ ಬೌಲರ್ ಆಗಿ ಬಳಸಿಕೊಳ್ಳಬಹುದು. ಆದರೆ ವಿದೇಶಿ ಸರಣಿಗಳಲ್ಲಿ ಅವರು ತಂಡದ ಪ್ರಧಾನ ಬೌಲರ್ ಆಗಲಿದ್ದಾರೆಯೇ? ಇದರ ಬಗ್ಗೆ ನನಗೆ ಖಚಿತತೆ ಇಲ್ಲ. ಹಾಗಾಗಿ ಅಲ್ಲಿ ಬೌಲಿಂಗ್ ಕೋಚ್ ಆಗಿ ಬಳಸಿಕೊಳ್ಳುಬಹುದು. ಇದರಿಂದ ಅವರಿಗೆ ಇನ್ನೂ ಹೆಚ್ಚಿನ ಸಮಯ ನೀಡಲು ಇದು ಒಂದು ಉತ್ತಮ ಮಾರ್ಗ" ಎಂದು ವಾರ್ನ್ ತಿಳಿಸಿದ್ದಾರೆ.
ಪಾಕಿಸ್ತಾನ ವಿರುದ್ಧದ ಮೊದಲ ಟೆಸ್ಟ್ ವೇಳೆ ವಿಕೆಟ್ ಪಡೆಯುವಲ್ಲಿ ವಿಫಲರಾಗಿದ್ದ ಆ್ಯಂಡರ್ಸನ್ ಸುತ್ತಾ ನಿವೃತ್ತಿ ಹೊಂದಲಿದ್ದಾರೆ ಎಂಬ ವದಂತಿ ಹಬ್ಬಿತ್ತು. ಆದರೆ 38 ವರ್ಷದ ಬೌಲರ್ ತಾವು ಬ್ರಾಡ್ ಜೊತೆಗಾರನಾಗಿ 2021ರ ಆ್ಯಶಸ್ ಸರಣಿ ಆಡಿದ ನಂತರ ನಿವೃತ್ತಿ ಬಗ್ಗೆ ಚಿಂತಿಸುವುದಾಗಿ ಹೇಳಿದ್ದರು.