ಹ್ಯಾಮಿಲ್ಟನ್:ನ್ಯೂಜಿಲ್ಯಾಂಡ್ ವಿರುದ್ಧದ ಐದು ಪಂದ್ಯಗಳ ಟಿ-20 ಸರಣಿಯನ್ನು ಇನ್ನು ಎರಡು ಪಂದ್ಯಗಳು ಬಾಕಿ ಇರುವಾಗಲೇ ಸರಣಿ ವಶಪಡಿಸಿಕೊಂಡಿದೆ. ನಿನ್ನೆ ನಡೆದ ಪಂದ್ಯದಲ್ಲಿ ಟೀಂ ಇಂಡಿಯಾ ಗೆಲುವಿಗೆ ಕಾರಣರಾದ ಆರಂಭಿಕ ಆಟಗಾರ ರೋಹಿತ್ ಶರ್ಮಾ ಗೆಲುವಿನ ಶ್ರೇಯಸ್ಸನ್ನ ತಂಡದ ಸಹ ಆಟಗಾರನಿಗೆ ನೀಡಿದ್ದಾರೆ.
ಸೆಡ್ಡನ್ ಪಾರ್ಕ್ನಲ್ಲಿ ನಡೆದ ಮೂರನೇ ಟಿ-20 ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡ ಗೆಲುವು ಸಾಧಿಸಲು ಅಂತಿಮ ಓವರ್‌ನಲ್ಲಿ 9 ರನ್ ಬೇಕಿತ್ತು. ಆದರೆ ಅದ್ಭುತ ಬೌಲಿಂಗ್ ಪ್ರದರ್ಶಿಸಿದ ವೇಗಿ ಮೊಹಮ್ಮದ್ ಶಮಿ 8 ರನ್ ಬಿಟ್ಟುಕೊಟ್ಟು ಕೇನ್ ವಿಲಿಯಮ್ಸನ್ ಮತ್ತು ರಾಸ್ ಟೇಲರ್ ವಿಕೆಟ್ ಪಡೆದು ಕಿವೀಸ್ಗೆ ಶಾಕ್ ನೀಡಿದ್ದಲ್ಲದೇ ಪಂದ್ಯವನ್ನ ಟೈ ಮಾಡಿದರು.
ಪಂದ್ಯ ಟೈ ಆಗಿದ್ದರಿಂದ ಸೂಪರ್ ಓವರ್ ಆಡಿಸಲಾಯಿತು. ಸೂಪರ್ ಓವರ್‌ನಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಕಿವೀಸ್ ಪಡೆ, ಬುಮ್ರಾ ಓವರ್‌ನಲ್ಲಿ 17 ರನ್ಗಳಿಸಿ 18 ರನ್ಗಳ ಟಾರ್ಗೆಟ್ ನೀಡಿತು. ಈ ಟಾರ್ಗೆಟ್ ಬೆನ್ನಟ್ಟಿದ ಟೀಂ ಇಂಡಿಯಾ ಮೊದಲ ನಾಲ್ಕು ಬಾಲ್ಗಳಲ್ಲಿ ಕೇವಲ 8 ರನ್ಗಳಿಸಿತು. ಕೊನೆಯ ಎರಡು ಎಸೆತಗಳಲ್ಲಿ ಅದ್ಭುತ ಎರಡು ಸಿಕ್ಸರ್ ಸಿಡಿಸಿ ಹಿಟ್ ಮ್ಯಾನ್ ರೋಹಿತ್ ಶರ್ಮಾ ನ್ಯೂಜಿಲ್ಯಾಂಡ್ ಪಡೆಯಿಂದ ಗೆಲುವನ್ನು ಕಸಿದುಕೊಂಡರು. ಈ ಮೂಲಕ ಭಾರತಕ್ಕೆ ಸರಣಿ ಗೆಲುವಿನ ಉಡುಗೊರೆಯನ್ನೂ ನೀಡಿದರು.
ಪಂದ್ಯ ಮುಗಿದ ಬಳಿಕ ಮಾತನಾಡಿರುವ ರೋಹಿತ್ ಶರ್ಮಾ ಗೆಲುವಿನ ಶ್ರೇಯಸ್ಸನ್ನ ಶಮಿಗೆ ನೀಡಿದ್ದಾರೆ. 'ಮೊಹಮ್ಮದ್ ಶಮಿ ಅವರ ಕೊನೆಯ ಓವರ್ ಮುಖ್ಯವಾಗಿತ್ತು. ಪಂದ್ಯ ಗೆದ್ದಿದ್ದೇ ಆ ಓವರ್‌ನಲ್ಲಿ. 2 ಸಿಕ್ಸರ್‌ನಿಂದ ಗೆಲುವು ಸಿಗಲಿಲ್ಲ, ಶಮಿ ಒಂದು ಓವರ್‌ನಲ್ಲಿ 9 ರನ್ ನೀಡದೆ ಪಂದ್ಯ ಟೈ ಮಾಡಿದಾಗಲೆ ನಮಗೆ ಗೆಲುವು ಸಿಕ್ಕಿತ್ತು. ತೇವಾಂಶ ಇರುವ ಸಂದರ್ಭದಲ್ಲಿ ಉತ್ತಮವಾಗಿ ಬೌಲಿಂಗ್ ಮಾಡುವುದು ಸುಲಭದ ಮಾತಲ್ಲ' ಎಂದು ಶಮಿ ಬೌಲಿಂಗ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.