ಡಾಕಾ: ಬಾಂಗ್ಲಾದೇಶದ ಸ್ಟಾರ್ ಕ್ರಿಕೆಟಿಗ ಶಕಿಬ್ ಅಲ್ ಹಸನ್ ಅವರನ್ನು ಐಸಿಸಿ 2 ವರ್ಷಗಳ ಕಾಲ ಎಲ್ಲಾ ಮಾದರಿಯ ಕ್ರಿಕೆಟ್ನಿಂದ ನಿಷೇಧಿಸಿ ಆದೇಶ ಹೊರಡಿಸಿದೆ.
2018ರಲ್ಲಿ ಶ್ರೀಲಂಕಾ ಹಾಗೂ ಜಿಂಬಾಬ್ವೆ ತ್ರಿಕೋನ ಸರಣಿ ಹಾಗೂ 2018ರ ಐಪಿಎಲ್ ವೇಳೆ ಬುಕ್ಕಿಗಳು ಶಕಿಬ್ ಅವರನ್ನು ಸಂಪರ್ಕಿಸಿದ್ದರು ಎಂದು ತನಿಖೆಯಲ್ಲಿ ದೃಢಪಟ್ಟಿದೆ. ಬುಕ್ಕಿಗಳು ತಮಗೆ ಆಫರ್ ನೀಡಿದ್ದನ್ನು ಶಕಿಬ್ ಒಪ್ಪಿಕೊಂಡಿದ್ದರಿಂದ ಅವರಿಗೆ ಆರ್ಟಿಕಲ್ 2.4.4 ಉಲ್ಲಂಘನೆ ಆರೋಪದ ಮೇಲೆ 2 ವರ್ಷ ನಿಷೇಧ ಶಿಕ್ಷೆ ಘೋಷಿಸಿದೆ.
2018ರಿಂದಲೇ ನಿಷೇಧ ಶಿಕ್ಷೆ ಆರಂಭವಾಗಿರುವುದರಿಂದ ಈಗಾಗಲೇ ಒಂದು ವರ್ಷ ಕಳೆದಿದೆ. ಇವರ ಶಿಕ್ಷೆಯ ಅವಧಿ 2020 ಅಕ್ಟೋಬರ್ಗೆ ಮುಗಿಯಲಿದೆ.
ನಿಷೇಧದ ನಂತರ ಮಾತನಾಡಿರುವ ಶಕಿಬ್, ನಾನು ತುಂಬಾ ಪ್ರೀತಿಸುವ ಕ್ರಿಕೆಟ್ ಆಟದಿಂದ ನಿಷೇಧವಾಗಿರುವುದು ದುಃಖದ ಸಂಗತಿ. ಆದರೆ ನಾನು ನನ್ನ ತಪ್ಪನ್ನು ಒಪ್ಪಿಕೊಳ್ಳುತ್ತಿದ್ದೇನೆ. ಐಸಿಸಿಯ ಕ್ರಿಕೆಟ್ನಲ್ಲಿ ಭ್ರಷ್ಟಾಚಾರ ರಹಿತವನ್ನಾಗಿ ಮಾಡಲು ಪ್ರಯತ್ನಿಸುತ್ತಿದ್ದು, ನಾನೊಬ್ಬ ಕ್ರಿಕೆಟಿಗನಾಗಿ ನನ್ನ ಕರ್ತವ್ಯವನ್ನು ನಿರ್ವಹಿಸುವಲ್ಲಿ ವಿಫಲನಾಗಿದ್ದು, ಶಿಕ್ಷೆಯನ್ನು ಸ್ವೀಕರಿಸುತ್ತೇನೆ. ನಾನು ಮಾಡಿದ ತಪ್ಪನ್ನು ಬೇರೆ ಯುವ ಕ್ರಿಕೆಟಿಗರು ಮಾಡದಿರಲಿ ಎಂದು ತಿಳಿಸಲು ಇಷ್ಟಪಡುತ್ತಿದ್ದೇನೆ ಎಂದು ಅವರು ಹೇಳಿದ್ದಾರೆ.