ನವದೆಹಲಿ: ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಮತ್ತು ಕಾರ್ಯದರ್ಶಿ ಜಯ್ ಶಾ ಅವರ ಅವಧಿ ವಿಸ್ತರಣೆಗೆ ಸಂಬಂಧಿಸಿದಂತೆ ಬಿಸಿಸಿಐ ಸಲ್ಲಿಸಿದ್ದ ಅರ್ಜಿಯಲ್ಲಿ ಫೆಬ್ರವರಿ 16 ರಂದು ವಿಚಾರಣೆ ನಡೆಸುವುದಾಗಿ ಸುಪ್ರೀಂಕೋರ್ಟ್ ಪ್ರಕಟಿಸಿದೆ.
ನ್ಯಾಯಮೂರ್ತಿ ಎಲ್ ನಾಗೇಶ್ವರ ರಾವ್ ನೇತೃತ್ವದ ಸುಪ್ರೀಂಕೋರ್ಟ್‌ನ ತ್ರಿಸದಸ್ಯರ ಪೀಠ ಫೆಬ್ರವರಿ 16 ರಂದು ವಿಚಾರಣೆ ನಡೆಸಲಿದೆ. ನ್ಯಾಯಮೂರ್ತಿ ಇಂದೂ ಮಲ್ಹೋತ್ರಾ ಅವರು ಈ ವಿಷಯವನ್ನು ಆಲಿಸಲು ಸಾಧ್ಯವಿಲ್ಲದ ಕಾರಣ ಮತ್ತೊಂದು ನ್ಯಾಯಪೀಠ ವಿಚಾರಣೆ ನಡೆಸಬೇಕಾಗಿದೆ ಎಂದು ನ್ಯಾಯಮೂರ್ತಿ ರಾವ್ ಹೇಳಿದರು.
ಈ ಪ್ರಕರಣದ ಬಗ್ಗೆ ಸುಗಮ ವಿಚಾರಣೆ ಖಚಿತಪಡಿಸಿಕೊಳ್ಳಲು ಎಲ್ಲ ಪಕ್ಷಗಳು, ಈ ನಿರ್ದಿಷ್ಟ ವಿಷಯದ ಬಗ್ಗೆ ತಮ್ಮ ಕಿರು ಟಿಪ್ಪಣಿಯನ್ನು ಅಮಿಕಸ್ ಕ್ಯೂರಿಯಾ ಪಿ ಎಸ್ ನರಸಿಂಹ ಅವರಿಗೆ ಸಲ್ಲಿಸುವಂತೆ ಕೇಳಿಕೊಂಡಿದ್ದಾರೆ.
ಸುಪ್ರೀಂಕೋರ್ಟ್, 2021ರ ಜನವರಿ 20 ರಂದು ಅರ್ಜಿ ವಿದಾರಣೆ ನಡೆಸುವುದಾಗಿ, 2020 ರ ಡಿಸೆಂಬರ್‌ನಲ್ಲಿ ಹೇಳಿತ್ತು.
ನ್ಯಾಯಮೂರ್ತಿ ಎಲ್ ನಾಗೇಶ್ವರ ರಾವ್ ನೇತೃತ್ವದ ನ್ಯಾಯಪೀಠವು ರಾಜ್ಯ ಕ್ರಿಕೆಟ್ ಸಂಘಗಳು ಸಲ್ಲಿಸಿದ ಹಲವಾರು ಇಂಟರ್ಲೋಕ್ಯೂಟರಿ ಅರ್ಜಿಗಳನ್ನು ವಿಲೇವಾರಿ ಮಾಡಿದ್ದು, ಈ ಅರ್ಜಿಗಳಿಗೆ ಸಂಬಂಧಪಟ್ಟಂತೆ ನ್ಯಾಯಾಲಯವು ತೀರ್ಪು ನೀಡುವ ಅಗತ್ಯವಿಲ್ಲ ಎಂದು ತಿಳಿಸಿತ್ತು.
ಬಿಸಿಸಿಐ ಅಥವಾ ಯಾವುದೇ ರಾಜ್ಯ ಸಂಘದಲ್ಲಿ ಸತತ ಆರು ವರ್ಷಗಳ ಕಾರ್ಯ ನಿರ್ವಹಿಸಿದವರು ಮೂರು ವರ್ಷಗಳ ಕೂಲಿಂಗ್-ಆಫ್ ಪಿರಿಯಡ್ (cooling-off period) ಅನುಸರಿಸಬೇಕಾಗುತ್ತದೆ. ಈ ನಿಯಮವನ್ನೂ ಕೂಡ ಪರಿಷ್ಕರಿಸುವಂತೆ ಒತ್ತಾಯಿಸಿ ಬಿಸಿಸಿಐ ಉನ್ನತ ನ್ಯಾಯಾಲಯದ ಮುಂದೆ ಅರ್ಜಿ ಸಲ್ಲಿಸಿತ್ತು.
ದೇಶದಲ್ಲಿ ಕ್ರಿಕೆಟ್ ಆಡಳಿತವನ್ನು ಸುಧಾರಿಸಲು ನ್ಯಾಯಮೂರ್ತಿ ಆರ್.ಎಂ.ಲೋಧಾ ಸಮಿತಿಯ ಕೂಲಿಂಗ್-ಆಫ್ ಪಿರಿಯಡ್(cooling-off period) ಅನ್ನು ಶಿಫಾರಸು ಮಾಡಿತ್ತು. 6 ವರ್ಷಗಳು ಕಾರ್ಯ ನಿರ್ವಹಿಸಿದವರು ಮತ್ತೆ 3 ವರ್ಷ ಯಾವುದೇ ಕ್ರಿಕೆಟ್ ಸಂಸ್ಥೆಯ ಹುದ್ದೆಯನ್ನು ಪಡೆಯುವಂತಿಲ್ಲ. ಬಿಸಿಸಿಐ ತನ್ನ ಹೊಸ ಸಂವಿಧಾನದಲ್ಲಿ ಈ ನಿಯಮವನ್ನು ಪರಿಷ್ಕರಿಸುವಂತೆ ನ್ಯಾಯಾಲಯವನ್ನು ಕೋರಿ ಅರ್ಜಿ ಸಲ್ಲಿಸಿತ್ತು.