ಹೈದರಾಬಾದ್: ಭಾರತದ ಟೆನ್ನಿಸ್ ತಾರೆ ಸಾನಿಯಾ ಮಿರ್ಜಾ ಇದೇ ಮೊದಲ ಬಾರಿಗೆ ಪತಿ ಶೋಯೆಬ್ ಮಲಿಕ್ ಜೊತೆಗಿನ ತಮ್ಮ ಮೊದಲ ಭೇಟಿಯ ಬಗ್ಗೆ ಮಾತನಾಡಿದ್ದಾರೆ.
"ಶೋಯೆಬ್ ಮಲಿಕ್ ಬಗ್ಗೆ ಒಂದಷ್ಟು ವಿಚಾರ ತಿಳಿದಿತ್ತು. ಹಾಗೆಯೇ ನನ್ನ ಬಗ್ಗೆಯೂ ಅವರು ತಿಳಿದುಕೊಂಡಿದ್ದರು. ಹೋಬಾರ್ಟ್ನ ರೆಸ್ಟೋರೆಂಟ್ ಒಂದರಲ್ಲಿ ನಮ್ಮಿಬ್ಬರ ಮೊದಲ ಭೇಟಿಯಾಯಿತು. ಜನರ ಓಡಾಟ ಬಿಡಿ, ಸಂಜೆ ಆರು ಗಂಟೆ ಬಳಿಕ ಆ ರೆಸ್ಟೋರೆಂಟ್ ಆಸುಪಾಸಿನಲ್ಲಿ ಒಂದೇ ಒಂದು ಪ್ರಾಣಿ-ಪ್ಷಕಿಯೂ ಕಾಣಸಿಗುವುದಿಲ್ಲ. ಆದರೆ ನಮ್ಮ ವಿಚಾರದಲ್ಲಿ ದೇವರ ಕೃಪೆ ಇತ್ತು ಎಂದು ಭಾವಿಸುತ್ತೇನೆ. ಹೀಗಾಗಿ ಆ ಸಂಜೆ ವೇಳೆ ನಮ್ಮಿಬ್ಬರ ಭೇಟಿ ಆಯಿತು."
"ಅಸಲಿಗೆ ಶೋಯೆಬ್ ಮಲಿಕ್, ನನ್ನನ್ನು ಭೇಟಿ ಮಾಡಲೆಂದೇ ಆ ರೆಸ್ಟೊರೆಂಟ್ಗೆ ಬಂದಿದ್ದರು. ಆದರೆ ಈ ವಿಚಾರ ನಮ್ಮ ಮೊದಲ ಭೇಟಿಯ ಕೆಲ ಸಮಯದ ಬಳಿಕ ತಿಳಿಯಿತು. ಹೀಗಾಗಿ ದೇವರಿಗೆ ಈ ಭೇಟಿಯಲ್ಲಿ ಸಂಪೂರ್ಣ ಕ್ರೆಡಿಟ್ ನೀಡುವುದಿಲ್ಲ" ಎಂದು ಸಾನಿಯಾ ನಗುತ್ತಾ ಹೇಳಿದ್ದಾರೆ.
2010ರ ಏಪ್ರಿಲ್ 12ರಂದು ವೈವಾಹಿಕ ಜೀವನಕ್ಕೆ ಕಾಲಿಟ್ಟ ಶೋಯೆಬ್ ಮಲಿಕ್- ಸಾನಿಯಾ ಮಿರ್ಜಾ ದಂಪತಿ ಸದ್ಯ ಗಂಡು ಮಗುವಿನ ಲಾಲನೆ ಪಾಲನೆಯಲ್ಲಿ ಖುಷಿಯ ದಿನಗಳನ್ನು ಕಳೆಯುತ್ತಿದ್ದಾರೆ.
2017ರ ಅಕ್ಟೋಬರ್ ಬಳಿಕ ಸಾನಿಯಾ ಟೆನ್ನಿಸ್ನಿಂದ ದೂರ ಸರಿದಿದ್ದು, ಸದ್ಯ ಕಂಬ್ಯಾಕ್ ಮಾಡಲು ಸಿದ್ಧತೆ ನಡೆಸುತ್ತಿದ್ದಾರೆ. ಜನವರಿಯಲ್ಲಿ ನಡೆಯಲಿರುವ ಹೋಬಾರ್ಟ್ ಇಂಟರ್ನ್ಯಾಷನಲ್ ಟೂರ್ನಿಯಲ್ಲಿ ಸಾನಿಯಾ ಮತ್ತೆ ಅಂಗಣಕ್ಕೆ ಕಾಲಿಡಲಿದ್ದಾರೆ.