ಲಂಡನ್: ಕೋವಿಡ್-19 ಭೀತಿಯಿಂದಾಗಿ ಕ್ರಿಕೆಟ್ ಚೆಂಡು ಹೊಳೆಯುವಂತೆ ಮಾಡಲು ಲಾಲಾರಸ (ಉಗುಳು) ಬಳಸುವುದನ್ನು ನಿಷೇಧಿಸುವುದರಿಂದ ಬೌಲರ್‌ಗಳ ಕೌಶಲ್ಯ ಸುಧಾರಿಸಬಹುದು ಎಂದು ಇಂಗ್ಲೆಂಡ್ ತಂಡದ ನಾಯಕ ಜೋ ರೂಟ್ ಅಭಿಪ್ರಾಯಪಟ್ಟಿದ್ದಾರೆ.
ಅನಿಲ್ ಕುಂಬ್ಳೆ ನೇತೃತ್ವದ ಐಸಿಸಿ ಕ್ರಿಕೆಟ್ ಸಮಿತಿಯು ಆಟ ಪುನಾರಂಭವಾದಾಗ ಚೆಂಡು ಹೊಳೆಯಲು ಲಾಲಾರಸದ (ಉಗುಳು) ಬಳಕೆಯನ್ನು ನಿಷೇಧಿಸುವಂತೆ ಶಿಫಾರಸು ಮಾಡಿದೆ. ಕ್ರಿಕೆಟ್ ಪುನಾರಂಭಕ್ಕಾಗಿ ಐಸಿಸಿ ತನ್ನ ಮಾರ್ಗಸೂಚಿಗಳಲ್ಲಿ ಈ ಅಭ್ಯಾಸವನ್ನು ನಿರ್ಬಂಧಿಸಿದೆ.
ಈ ನಿಯಮ ನಮ್ಮ ಪರವಾಗಿದ್ದು, ಕೌಶಲ್ಯ ಮಟ್ಟವನ್ನು ಹೆಚ್ಚಿಸುತ್ತದೆ ಎಂದು ರೂಟ್ ಹೇಳಿದ್ದಾರೆ. ಸಾಮಾನ್ಯವಾಗಿ ನಿಮಗಿರುವ ಸಹಾಯ ಸಿಗದಿದ್ದಾಗ ನಿಮ್ಮ ನಿಖರತೆಯನ್ನು ಸುಧಾರಿಸಬೇಕಾಗುತ್ತದೆ. ಬೌಲರ್ಗಳು ತಮ್ಮ ಸಾಮರ್ಥ್ಯವನ್ನು ಸುಧಾರಿಸಿಕೊಳ್ಳಲು ಈ ನಿಯಮ ಸಹಕಾರಿಯಾಗಲಿದೆ ಎಂದಿದ್ದಾರೆ.
ಬ್ಯಾಟ್ ಮತ್ತು ಚೆಂಡಿನ ನಡುವೆ ಸಮತೋಲನವನ್ನು ಸಾಧಿಸಲು ಪರ್ಯಾಯ ಆಯ್ಕೆಗಾಗಿ ಆಸ್ಟ್ರೇಲಿಯಾದ ವೇಗಿ ಪ್ಯಾಟ್ ಕಮ್ಮಿನ್ಸ್ ಬೇಡಿಕೆ ಇಟ್ಟಿದ್ದಾರೆ. ಆಸೀಸ್ ಸ್ಪಿನ್ ದಂತಕಥೆ ಶೇನ್ ವಾರ್ನ್ ಚೆಂಡಿನ ಒಂದು ಬದಿಯನ್ನು ಭಾರವಾಗಿರುವಂತೆ ಮಾಡಿದರೆ, ಹೊಳೆಪಿನ ಅಗತ್ಯವಿಲ್ಲ ಎಂದಿದ್ದಾರೆ.