ನವದೆಹಲಿ :ಸಚಿನ್ ತೆಂಡೂಲ್ಕರ್ ಅವರ ಶತಕಗಳ ಶತಕದ ದಾಖಲೆಯನ್ನು ಪ್ರಸ್ತುತ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಬ್ರೇಕ್ ಮಾಡಲಿದ್ದಾರೆ ಎಂದು ಆಸ್ಟ್ರೇಲಿಯಾದ ಮಾಜಿ ಸ್ಪಿನ್ನರ್ ಬ್ರಾಡ್ ಹಾಗ್ ಭವಿಷ್ಯ ನುಡಿದಿದ್ದಾರೆ.
ಸಚಿನ್ ತಂಡೂಲ್ಕರ್ ತಮ್ಮ 22 ವರ್ಷಗಳ ವೃತ್ತಿ ಜೀವನದಲ್ಲಿ 51 ಟೆಸ್ಟ್ ಹಾಗೂ 49 ಏಕದಿನ ಶತಕಗಳನ್ನು ಸಿಡಿಸಿದ್ದಾರೆ. ವಿರಾಟ್ ಕೊಹ್ಲಿ ಪ್ರಸ್ತುತ 70 ಶತಕ ಸಿಡಿಸಿದ್ದು, ಹೆಚ್ಚು ಶತಕ ಸಿಡಿಸಿರುವ ಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದ್ದಾರೆ. (43 ಏಕದಿನ+27 ಟೆಸ್ಟ್)
ಆಸ್ಟ್ರೇಲಿಯಾದ ಮಾಜಿ ಸ್ಪಿನ್ನರ್ ಬ್ರಾಡ್ ಹಾಗ್ ಆಸ್ಟ್ರೇಲಿಯಾ ತಂಡದ ಮಾಜಿ ನಾಯಕ ರಿಕಿ ಪಾಂಟಿಂಗ್ 71 ಶತಕ ಸಿಡಿಸುವ ಮೂಲಕ ಸಚಿನ್ ನಂತರದ ಸ್ಥಾನ ಪಡೆದಿದ್ದಾರೆ. ಹಾಗ್ ತಮ್ಮ ಯೂಟ್ಯೂಬ್ ಚಾನೆಲ್ನಲ್ಲಿ ಲೈವ್ ಸಂವಾದ ನಡೆಸುವ ವೇಳೆ ಅಭಿಮಾನಿಯೊಬ್ಬ ಕೊಹ್ಲಿ ಸಚಿನ್ರ ದಾಖಲೆಯನ್ನು ಅಳಿಸಿದ್ರೆ ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಖಂಡಿತವಾಗಿಯೂ ಅವರು ಮುರಿಯಲಿದ್ದಾರೆ. ಸಚಿನ್ ಆಡುತ್ತಿದ್ದಾಗ ಅವರಿದ್ದ ಫಿಟ್ನೆಸ್ಗಿಂತ ಕೊಹ್ಲಿ ತುಂಬಾ ಮುಂದಿರುವುದರಿಂದ ಆ ದಾಖಲೆ ಮುರಿಯಲು ಸಾಧ್ಯವಾಗುತ್ತದೆ ಎಂದು ಉತ್ತರಿಸಿದ್ದಾರೆ.
ಜೊತೆಗೆ ಅವರು(ಭಾರತ) ಗುಣಮಟ್ಟದ ಫಿಟ್ನೆಸ್ ತರಬೇತುದಾರರನ್ನು ಹೊಂದಿದ್ದಾರೆ. ಹಾಗೂ ಸಾಕಷ್ಟು ವೈದ್ಯರು, ಫಿಸಿಯೋಗಳನ್ನು ಮಂಡಳಿ ಒದಗಿಸಿಕೊಟ್ಟಿದೆ ಎಂದು ಹೇಳಿದ್ದಾರೆ. ಇದರಿಂದ ಅವರು ಮಿಸ್ ಮಾಡಿಕೊಳ್ಳುವ ಪಂದ್ಯಗಳ ಸಂಖ್ಯೆ ಕಡಿಮೆಯಿರುತ್ತದೆ. ಜೊತೆಗೆ ಈ ದಿನಗಳಲ್ಲಿ ಹೆಚ್ಚಿನ ಕ್ರಿಕೆಟ್ ಪಂದ್ಯಗಳನ್ನು ಆಯೋಜಿಸುವುದರಿಂದ ಕೊಹ್ಲಿ ಸಹಜವಾಗಿಯೇ ಸಚಿನ್ರ ಮಹತ್ವದ ದಾಖಲೆಯನ್ನು ಮುರಿಯಲಿದ್ದಾರೆ ಎಂದು ಹಾಗ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಮತ್ತೊಬ್ಬ ಅಭಿಮಾನಿ ಪ್ರಸ್ತುತ ಯಾವ ತಂಡದ ಬೌಲಿಂಗ್ ಆಟ್ಯಾಕ್ ಹೆಚ್ಚು ಬಲಶಾಲಿಯಾಗಿದೆ ಎಂದು ಕೇಳಿದ್ದಕ್ಕೆ ಭಾರತ ತಂಡದ ಬೌಲಿಂಗ್ ಎಂದಿದ್ದಾರೆ.