ನವದೆಹಲಿ: ಭಾರತ ತಂಡದ ಲೆಜೆಂಡ್ ಸಚಿನ್ ತೆಂಡೂಲ್ಕರ್ 2007ರ ಸಂದರ್ಭದಲ್ಲಿ ಕ್ರಿಕೆಟ್ ಎಂಜಾಯ್ ಮಾಡುತ್ತಿರಲಿಲ್ಲ. ಅವರು ಕ್ರಿಕೆಟ್ನಿಂದಲೇ ದೂರವಾಗಬೇಕೆಂದು ಬಯಸಿದ್ದರು ಎಂದು ಭಾರತ ತಂಡದ ಯಶಸ್ವಿ ಕೋಚ್ ಆಗಿದ್ದ ಗ್ಯಾರಿ ಕರ್ಸ್ಟನ್ ಬಹಿರಂಗಪಡಿಸಿದ್ದಾರೆ.
2007ರ ವಿಶ್ವಕಪ್ ವರೆಗೂ ಸಚಿನ್ಗೆ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ ನಡೆಸಲು ಅವಕಾಶ ನೀಡಲಾಗುತ್ತಿತ್ತು. ಆ ವಿಶ್ವಕಪ್ನಲ್ಲಿ ಭಾರತ ಲೀಗ್ನಲ್ಲೇ ಹೊರಬಿದ್ದಿತ್ತು. ಆಗಿನ ಕೋಚ್ ಹಾಗೂ ಹಿರಿಯ ಆಟಗಾರರ ವಿರುದ್ಧ ದೇಶದಾದ್ಯಂತ ವ್ಯಾಪಕ ಟೀಕೆ ಕೇಳಿ ಬಂದಿತ್ತು.
ಆದರೆ, 2007ರ ನಂತರ ಸಚಿನ್ ಆಟದಲ್ಲಿ ನಾಟಕೀಯ ತಿರುವು ಪಡೆದುಕೊಂಡಿತು. ಅವರು ಅಲ್ಲಿಂದ 2013ರ ವರೆಗೆ 24 ಅಂತಾರಾಷ್ಟ್ರೀಯ ಶತಕ ಸಿಡಿಸಿ ಮಿಂಚಿದರು.
ಟಾಲ್ಕ್ ಸ್ಫೋರ್ಟ್ಸ್ ಜೊತೆ ಮಾತನಾಡಿರುವ ಕರ್ಸ್ಟನ್ , ನಾನು ಭಾರತಕ್ಕೆ ಬಂದಾಗ ಸಚಿನ್ ತೆಂಡೂಲ್ಕರ್ ಬಗ್ಗೆ ಆಲೋಚಿಸಿದರೆ, ಅವರು ಕ್ರಿಕೆಟ್ ತ್ಯಜಿಸಲು ಬಯಸಿದ್ದರು. ಅವರ ಪ್ರಕಾರ, ಆ ಸಂದರ್ಭದಲ್ಲಿ ಅವರಿಗಿಷ್ಟವಿಲ್ಲದ ಬ್ಯಾಟಿಂಗ್ ಕ್ರಮಾಂಕದಲ್ಲಿ ಆಡುತ್ತಿದ್ದರು. ಆ ಸಂದರ್ಭದಲ್ಲಿ ಕ್ರಿಕೆಟ್ ಅನ್ನು ಎಂಜಾಯ್ ಮಾಡುತ್ತಿರಲಿಲ್ಲ. ಆದರೆ, ನಂತರದ ಮೂರು ವರ್ಷಗಳಲ್ಲಿ ಅವರು 18 ಶತಕಗಳಿಸಿದ್ದರು. ಅದಕ್ಕೆ ಕಾರಣ ಅವರು ನನ್ನ ಕೋಚಿಂಗ್ ಅವಧಿಯಲ್ಲಿ ಅವರಿಗೆ ಬೇಕಾದ ಬ್ಯಾಟಿಂಗ್ ಕ್ರಮಾಂಕಕ್ಕೆ ಹಿಂತಿರುಗಿದ್ದರು. ಅಲ್ಲದೇ ನಾವು ವಿಶ್ವಕಪ್ ಕೂಡ ಜಯಿಸಿದೆವು ಎಂದು ಕರ್ಸ್ಟನ್ ಹೇಳಿದ್ದಾರೆ.
ನಾನು ಸಚಿನ್ ತೆಂಡೂಲ್ಕರ್ಗೆ ಕೋಚ್ ಆಗಿ ಏನನ್ನೂ ಮಾಡಲಿಲ್ಲ. ಆದರೆ ಅವರಿಗೆ ಅಗತ್ಯವಾಗಿದ್ದ ವಾತಾವರಣವನ್ನು ಮಾತ್ರ ನಿರ್ಮಿಸಿಕೊಟ್ಟಿದ್ದೆ. ಅವರಿಗೆ ಆಟ ತಿಳಿದಿತ್ತು. ಆದರೆ ಅವರಿಗೆ ಬೇಕಾಗಿದ್ದದ್ದು ಒಂದು ಪರಿಸರ. ಅವರಷ್ಟೇ ಅಲ್ಲ ತಂಡದವರೆಲ್ಲರಿಗೂ ಅದು ಅಗತ್ಯವಾಗಿತ್ತು ಎಂದು ಕರ್ಸ್ಟನ್ ಹೇಳಿಕೊಂಡಿದ್ದಾರೆ.
ತೆಂಡೂಲ್ಕರ್ ತಮ್ಮ ಅಂತಾರಾಷ್ಟ್ರೀಯ ಕ್ರಿಕೆಟ್ ಕರಿಯರ್ನಲ್ಲಿ 100 ಅಂತಾರಾಷ್ಟ್ರೀಯ ಶತಕಗಳ ಸಹಿತ 34,357 ರನ್ಗಳಿಸಿದ್ದಾರೆ. ಅಲ್ಲದೇ ತಮ್ಮ ಕನಸಾದ ವಿಶ್ವಕಪ್ ಗೆಲ್ಲುವಲ್ಲಿ ಸಫಲರಾದರು. 2011ರ ವಿಶ್ವಕಪ್ ಟೂರ್ನಿಯಲ್ಲಿ ಎರಡು ಶತಕಗಳ ಸಹಿತ 482 ರನ್ ಸಿಡಿಸಿ ಎರಡನೇ ಗರಿಷ್ಠ ಸ್ಕೋರರ್ ಎನಿಸಿಕೊಂಡಿದ್ದರು.