ನವದೆಹಲಿ:ಕಾಡ್ಗಿಚ್ಚಿನಿಂದ ಹಾನಿಗೊಳಗಾದ ಆಸ್ಟ್ರೇಲಿಯಾಕ್ಕೆ ಸಹಾಯ ಮಾಡಲು ನಿರ್ಧರಿಸಿ ಆಸಿಸ್ ಕ್ರಿಕೆಟಿಗರು ಆಯೋಜಿಸಿರುವ ಬುಷ್ಫೈರ್ ಕ್ರಿಕೆಟ್ ಬ್ಯಾಷ್ ಪಂದ್ಯ ನಾಳೆ ನಡೆಯಲಿದೆ. ಇದಕ್ಕೂ ಮೊದಲು ಒಂದು ಓವರ್ಗಳ ಕಾಲ ಬ್ಯಾಟ್ ಬೀಸುವಂತೆ ಆಸೀಸ್ ಆಟಗಾರ್ತಿ ಸಚಿನ್ ತೆಂಡೂಲ್ಕರ್ಗೆ ಆಹ್ವಾನ ನೀಡಿದ್ದಾರೆ.
ಸಿಡ್ನಿಯಲ್ಲಿ ನಾಳೆ ಬುಷ್ಫೈರ್ ಕ್ರಿಕೆಟ್ ಬ್ಯಾಷ್ ಪಂದ್ಯ ನಡೆಯಲಿದೆ. ಈ ಪಂದ್ಯಕ್ಕೂ ಮೊದಲು ಅದೇ ಮೈದಾನದಲ್ಲಿ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ವನಿತೆಯರ ನಡುವೆ ಟಿ-20 ಪಂದ್ಯ ನಡೆಯಲಿದೆ. ಈ ವೇಳೆ ಇನ್ನಿಂಗ್ಸ್ ಬ್ರೇಕ್ ಸಮಯದಲ್ಲಿ ಒಂದು ಓವರ್ಗೆ ಬ್ಯಾಟ್ ಬೀಸುವಂತೆ ಆಸಿಸ್ ಆಲ್ರೌಂಡರ್ ಎಲಿಸ್ ಪೆರ್ರಿ ಸಚಿನ್ ತೆಂಡೂಲ್ಕರ್ಗೆ ರಿಕ್ವೆಸ್ಟ್ ಮಾಡಿದ್ದಾರೆ.
ಈ ಬಗ್ಗೆ ವಿಡಿಯೋ ಮಾಡಿರುವ ಎಲಿಸ್ ಪೆರ್ರಿ, 'ಸಚಿನ್, ನೀವು ಬುಷ್ಫೈರ್ ಕ್ರಿಕೆಟ್ ಪಂದ್ಯಕ್ಕಾಗಿ ಆಸ್ಟ್ರೇಲಿಯಾಕ್ಕೆ ಬಂದಿರುವುದು ಸಂತಸ ತಂದಿದೆ. ನೀವು ಒಂದು ತಂಡದ ಕೋಚ್ ಆಗಿದ್ದೀರಿ ಎಂದು ತಿಳಿದಿದೆ. ಆದರೆ ನಿನ್ನೆ ಕೆಲ ಆಟಗಾರ್ತಿಯರು ಕುಳಿತು ಮಾತನಾಡಿಕೊಂಡೆವು. ನೀವು ನಿವೃತ್ತಿಯಿಂದ ಹೊರ ಬಂದು ಇನ್ನಿಂಗ್ಸ್ ಬ್ರೇಕ್ ಸಮಯದಲ್ಲಿ ಒಂದು ಓವರ್ ಬ್ಯಾಟ್ ಬೀಸಬೇಕು' ಎಂದಿದ್ದಾರೆ.
ಎಲಿಸ್ ಪೆರ್ರಿ ಆಹ್ವಾನಕ್ಕೆ ಪ್ರತಿಕ್ರಿಯಿಸಿರುವ ಸಚಿನ್, ಭುಜದ ನೋವಿನಿಂದ ವೈದ್ಯರು ಕ್ರಿಕೆಟ್ ಆಡಬಾರದು ಎಂದು ಹೇಳಿದ್ದರೂ, ನಾನು ಒಂದು ಓವರ್ ಬ್ಯಾಟ್ ಬೀಸಲು ಸಿದ್ದನಿದ್ದೇನೆ ಎಂದಿದ್ದಾರೆ. ಈ ಮೂಲಕ ಬಹುದಿನಗಳಿಂದ ಮೈದಾನಕ್ಕಿಳಿದು ಬ್ಯಾಟ್ ಬೀಸದ ಕ್ರಿಕೆಟ್ ದೇವರು ನಾಳೆ ಆಸೀಸ್ ಆಟಗಾರ್ತಿಯ ದಾಳಿಯನ್ನು ಎದುರಿಸಲು ಓಕೆ ಎಂದಿದ್ದಾರೆ. ಹಲವು ದಿನಗಳಿಂದ ದೇವರ ಆಟ ನೋಡಲು ಕಾಯುತಿದ್ದ ಕ್ರಿಕೆಟ್ ಅಭಿಮಾನಿಗಳಿಗೆ ಈ ಸುದ್ದಿ ಸಂತಸ ತಂದಿದೆ.