ಬ್ರಿಸ್ಬೇನ್ :ಆಸ್ಟ್ರೇಲಿಯಾ ವಿರುದ್ಧದ ಕೊನೆಯ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡ ಏಟಿಗೆ ಎದುರೇಟು ನೀಡಿ ತೀವ್ರ ಪೈಪೋಟಿ ನೀಡುತ್ತಿದೆ. ಈಗಾಗಲೇ ನಾಲ್ಕು ದಿನವೂ ಕಠಿಣ ಪೈಪೋಟಿ ನೀಡಿರುವ ಟೀಂ ಇಂಡಿಯಾ ಕೊನೆಯ ದಿನ ಟೆಸ್ಟ್ ಪಂದ್ಯವನ್ನು ಗೆಲ್ಲಲು 328 ರನ್ಗಳ ಗುರಿ ಪಡೆದಿದೆ.
ಮೊಹಮ್ಮದ್ ಸಿರಾಜ್ ಮತ್ತು ಶಾರ್ದುಲ್ ಠಾಕೂರ್ ನಾಲ್ಕನೇ ದಿನ 9 ವಿಕೆಟ್ ಪಡೆದು ಆಸ್ಟ್ರೇಲಿಯಾ ತಂಡವನ್ನು 294 ರನ್ಗಳಿಗೆ ಆಲೌಟ್ ಮಾಡಲು ನೆರವಾಗಿದ್ದರು. ಸಿರಾಜ್ 5 ವಿಕೆಟ್ ಪಡೆದ್ರೆ, ಠಾಕೂರ್ 4 ವಿಕೆಟ್ ಪಡೆದರು.
ಭಾರತದ ಲೆಜೆಂಡರಿ ಕ್ರಿಕೆಟರ್ ಸಚಿನ್ ತೆಂಡೂಲ್ಕರ್ ಸಿರಾಜ್ ಅತ್ಯುತ್ತಮ ಬೌಲಿಂಗ್ ಪ್ರದರ್ಶನ ಮತ್ತು ಶಾರ್ದುಲ್ ಅವರ ಆಲ್ರೌಂಡರ್ ಪ್ರದರ್ಶನವೇ ಸರಣಿಯನ್ನು ಇನ್ನೂ ಜೀವಂತವಾಗಿರಿಸಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
"ಮೊಹಮ್ಮದ್ ಸಿರಾಜ್ ಟೆಸ್ಟ್ ಕ್ರಿಕೆಟ್ನಲ್ಲಿ ಮೊದಲ 5 ವಿಕೆಟ್ ಪಡೆದು ಉತ್ತಮ ಪ್ರದರ್ಶನ ನೀಡಿದ್ದೀರಾ.. ಶಾರ್ದುಲ್ ಠಾಕೂರ್ ನಿಮ್ಮ ಪ್ರಮುಖ ಆಲ್ರೌಂಡ್ ಪ್ರದರ್ಶನ ಪಂದ್ಯವನ್ನು ಆಸಕ್ತಿದಾಯಕವಾಗಿರಿಸಿದೆ. ಅದಕ್ಕೂ ಮೀರಿ ಟೆಸ್ಟ್ ಸರಣಿಯನ್ನು ಜೀವಂತವಾಗಿರಿಸಿದೆ" ಎಂದು ಸಚಿನ್ ತೆಂಡೂಲ್ಕರ್ ತಮ್ಮ ಟ್ವಿಟರ್ನಲ್ಲಿ ಪೋಸ್ಟ್ ಮಾಡಿದ್ದಾರೆ.
ಶಾರ್ದುಲ್ ಠಾಕೂರ್ ಮೊದಲ ಇನ್ನಿಂಗ್ಸ್ನಲ್ಲಿ ಭಾರತ 186ಕ್ಕೆ 6 ವಿಕೆಟ್ ಕೆಳದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ವೇಳೆ ವಾಷಿಂಗ್ಟನ್ ಜೊತೆ ಸೇರಿ 123 ರನ್ಗಳನ್ನ ಸೇರಿಸಿದ್ದರು. ಠಾಕೂರ್ 67 ರನ್ಗಳಿಸಿದ್ರೆ, ಸುಂದರ್ 62 ರನ್ಗಳಿಸಿ ತಂಡದ ಮೊತ್ತವನ್ನು 300ರ ಗಡಿ ದಾಟಿಸಿದ್ದರು. ಅಲ್ಲದೆ ಮೊದಲ ಇನ್ನಿಂಗ್ಸ್ನಲ್ಲಿ 3 ವಿಕೆಟ್ ಪಡೆದಿದ್ದ ಅವರು ಎರಡನೇ ಇನ್ನಿಂಗ್ಸ್ನಲ್ಲೂ 4 ವಿಕೆಟ್ ಪಡೆದಿದ್ದಾರೆ.
ಇದನ್ನು ಓದಿ:ಆಸ್ಟ್ರೇಲಿಯಾ ಪ್ರವಾಸದಲ್ಲಿ ಈ ಹುಡುಗ ಶ್ರೇಷ್ಠ ಆಟಗಾರನಾಗಿದ್ದಾನೆ : ವಿರೇಂದ್ರ ಸೆಹ್ವಾಗ್