ನವದೆಹಲಿ:ವಿಶ್ವ ಕಂಡ ಶ್ರೇಷ್ಠ ಬ್ಯಾಟ್ಸ್ಮನ್ ಸಚಿನ್ ತೆಂಡೂಲ್ಕರ್ ಅವರಿಗೆ ಐಸಿಸಿ ಹಾಲ್ ಆಫ್ ಫೇಮ್ ಗೌರವ ನೀಡಿದೆ.
ಕ್ರಿಕೆಟ್ ದೇವರೊಂದಿಗೆ ದಕ್ಷಿಣ ಆಫ್ರಿಕಾ ತಂಡದ ಆಟಗಾರ ಅಲನ್ ಡೊನಾಲ್ಡ್ ಮತ್ತು ಆಸ್ಟ್ರೇಲಿಯಾ ಮಹಿಳಾ ಕ್ರಿಕೆಟ್ ತಂಡದ ಅಟಗಾರ್ತಿ ಕ್ಯಾಥರಿನ್ ಫಿಟ್ಜ್ಪ್ಯಾಟ್ರಿಕ್ ಅವರನ್ನೂ ಹಾಲ್ ಆಫ್ ಫೇಮ್ ಕ್ಲಬ್ಗೆ ಸೇರಿಸಿದೆ. ಈ ಮೂಲಕ ಸಚಿನ್ ತೆಂಡೂಲ್ಕರ್ ಈ ಹಿರಿಮೆಗೆ ಪಾತ್ರವಾದ ಭಾರತ ಕ್ರಿಕೆಟ್ ತಂಡದ 6ನೇ ಆಟಗಾರರಾಗಿದ್ದಾರೆ.
ಸಚಿನ್ಗೂ ಮೊದಲು ಬಿಷನ್ ಸಿಂಗ್ ಬೇಡಿ(2009), ಕಪಿಲ್ ದೇವ್(2009), ಸುನೀಲ್ ಗವಾಸ್ಕರ್(2009) ಅನಿಲ್ ಕುಂಬ್ಳೆ (2015) ಮತ್ತು ರಾಹುಲ್ ದ್ರಾವಿಡ್(2018) ಐಸಿಸಿ ಹಾಲ್ ಆಫ್ ಫೇಮ್ ಕ್ಲಬ್ ಗೌರವ ದೊರೆತಿತ್ತು.
ಇದೇ ವೇಳೆ ಐಸಿಸಿ ಜೊತೆ ಮಾತನಾಡಿರುವ ಸಚಿನ್, ಪ್ರತಿಯೊಂದು ಪ್ರಶಸ್ತಿಯೂ ಒಬ್ಬ ವ್ಯಕ್ತಿಗೆ ಉತ್ತೇಜನ ನೀಡುತ್ತದೆ. ಮತ್ತಷ್ಟು ಸಾಧಿಸಲು ಸ್ಪೂರ್ತಿ ನೀಡುತ್ತದೆ. ನನ್ನನ್ನು ಗುರುತಿಸಿ ಈ ಗೌರವ ನೀಡಿದ್ದಕ್ಕೆ ಐಸಿಸಿಗೆ ಧನ್ಯವಾದಗಳು. ನನಗೆ ನನ್ನ ತಂದೆಯೇ ಹೀರೋ, 2011ರಲ್ಲಿ ವಿಶ್ವಕಪ್ ಟ್ರೋಫಿ ಎತ್ತಿ ಹಿಡಿದ ಕ್ಷಣ ಅವಿಸ್ಮರಣೀಯವಾದದ್ದು ಎಂದು ಸಂತಸ ವ್ಯಕ್ತಪಡಿಸಿದ್ರು.