ನವದೆಹಲಿ: ಡಿಆರ್ಎಸ್ ವ್ಯವಸ್ಥೆಯಲ್ಲಿ 'ಅಂಪೈರ್ಸ್ ಕಾಲ್' ಷರತ್ತನ್ನು ಪ್ರಶ್ನಿಸಿರುವ ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್ ಈ ನಿರ್ಧಾರವನ್ನು ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಮರು ಮೌಲ್ಯಮಾಪನ ಮಾಡುವ ಅಗತ್ಯವಿದೆ ಎಂದಿದ್ದಾರೆ.
"ಆನ್-ಫೀಲ್ಡ್ ಅಂಪೈರ್ ತೆಗೆದುಕೊಂಡ ನಿರ್ಧಾರದ ಬಗ್ಗೆ ಅಸಮಾಧಾನ ಇರುವ ಕಾರಣ ಆಟಗಾರರು ಡಿಆರ್ಎಸ್ ಮೊರೆ ಹೋಗುತ್ತಾರೆ. ಹೀಗಾಗಿ ಡಿಆರ್ಎಸ್ ವ್ಯವಸ್ಥೆಯನ್ನು ಐಸಿಸಿ ಕೂಲಂಕುಷವಾಗಿ ಪರಿಶೀಲಿಸಬೇಕಾಗಿದೆ, ವಿಶೇಷವಾಗಿ 'ಅಂಪೈರ್ಸ್ ಕಾಲ್' ವಿಚಾರದಲ್ಲಿ ಇದರ ಅಗತ್ಯ ಹೆಚ್ಚಿದೆ" ಎಂದಿದ್ದಾರೆ.
ಕೆಲ ಸಂದರ್ಭದಲ್ಲಿ ಬಾಲ್-ಟ್ರ್ಯಾಕಿಂಗ್ ತಂತ್ರಜ್ಞಾನದಲ್ಲಿ 'ಅಂಪೈರ್ಸ್ ಕಾಲ್' ಷರತ್ತು ಕಾರ್ಯರೂಪಕ್ಕೆ ಬರುತ್ತದೆ. ಇಂಥ ಸಂದರ್ಭದಲ್ಲಿ ಅಂಪೈರ್ ನಿರ್ಧಾರಕ್ಕೆ ಬದ್ಧರಾಗಿರಬೇಕಾಗುತ್ತದೆ. ಆಸ್ಟ್ರೇಲಿಯಾ ಮತ್ತು ಭಾರತ ನಡುವಿನ ಎರಡನೇ ಟೆಸ್ಟ್ ಪಂದ್ಯದ ಮೂರನೇ ದಿನದ ಆಟದಲ್ಲಿ 'ಅಂಪೈರ್ಸ್ ಕಾಲ್' ಎರಡು ಬಾರಿ ಆಸೀಸ್ ಆಟಗಾರರ ರಕ್ಷಣೆ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು.