ನವದೆಹಲಿ :ವಿಶ್ವಕಂಡ ಶ್ರೇಷ್ಠ ಬ್ಯಾಟ್ಸ್ಮನ್, ಬ್ಯಾಟಿಂಗ್ ವಿಭಾಗದಲ್ಲಿರುವ ಹತ್ತಾರು ದಾಖಲೆಗಳನ್ನು ತನ್ನ ಹೆಸರಿಗೆ ಬರೆದುಕೊಂಡಿರುವ ಭಾರತದ ಮಾಜಿ ಆಟಗಾರ ಸಚಿನ್ ತೆಂಡೂಲ್ಕರ್ ವಿರುದ್ಧ ಪಾಕಿಸ್ತಾನದ ಮಾಜಿ ಆಟಗಾರ ಶಾಹೀದ್ ಆಫ್ರಿದಿ ನಾಲಿಗೆ ಹರಿಬಿಟ್ಟಿದ್ದಾರೆ.
ಮೊನ್ನೆ ತಾನೆ ಭಾರತದ ವಿರುದ್ಧ ಹಲವಾರು ಪಂದ್ಯಗಳಲ್ಲಿ ನಾವು ಜಯ ಸಾಧಿಸಿದ್ದೇವೆ. ಪ್ರತಿ ಪಂದ್ಯದ ಸೋಲಿನ ನಂತರ ಭಾರತೀಯರು ನಮ್ಮ ಬಳಿ ಕ್ಷಮೆ ಕೋರುತ್ತಿದ್ದರು ಎಂದು ಹೇಳಿಕೆ ನೀಡಿ, ಭಾರತೀಯ ಅಭಿಮಾನಿಗಳು ಹಾಗೂ ಕ್ರಿಕೆಟಿಗರಿಂದ ಛೀಮಾರಿಯಾಕಿಸಿಕೊಂಡಿದ್ದ ಆಫ್ರಿದಿ, ಇದೀಗ ಸಚಿನ್ ತೆಂಡೂಲ್ಕರ್ ಪಾಕ್ ವೇಗಿ ಶೋಯಬ್ ಅಖ್ತರ್ ಅವರ ಬೌಲಿಂಗ್ಗೆ ಬ್ಯಾಟಿಂಗ್ ಮಾಡಲು ಭಯಪಡುತ್ತಿದ್ದರು ಎಂದು ಮತ್ತೊಂದು ವಿವಾದಾತ್ಮಕ ಹೇಳಿಕೆ ನೀಡಿ ಭಾರತದ ಅಭಿಮಾನಿಗಳ ಆಕ್ರೋಶಕ್ಕೆ ತುತ್ತಾಗಿದ್ದಾರೆ.
"ಸಚಿನ್ ತೆಂಡುಲ್ಕರ್, ಶೋಯೆಬ್ ಅಖ್ತರ್ ಬೌಲಿಂಗ್ನಲ್ಲಿ ಆಡಲು ಹೆದರುತ್ತಿದ್ದರು. ಅಖ್ತರ್ರ ವೇಗದ ಬೌಲಿಂಗ್ ಎದುರಿಸುವಾಗ ಸಚಿನ್ ಕಾಲುಗಳು ನಡುಗುತ್ತಿದ್ದವು. ಇದನ್ನು ನಾನು ಕವರ್ಸ್ನಲ್ಲಿ ಫೀಲ್ಡಿಂಗ್ ಮಾಡುವಾಗ ಕಣ್ಣಾರೆ ಕಂಡಿದ್ದೇನೆ" ಎಂದು ಯೂಟ್ಯೂಬ್ ಸಂದರ್ಶನವೊಂದರಲ್ಲಿ ತಮ್ಮ 9 ವರ್ಷದ ಹಿಂದಿನ ಹೇಳಿಕೆಯನ್ನೇ ಮತ್ತೆ ಪುನ: ಹೇಳಿದ್ದಾರೆ.
ನೀವು ಮಿಡ್ ಆಫ್ ಅಥವಾ ಕವರ್ಸ್ನಲ್ಲಿ ಫೀಲ್ಡಿಂಗ್ ಮಾಡುತ್ತಿದ್ರೆ ಬ್ಯಾಟ್ಸ್ಮನ್ ಯಾವ ಸ್ಥಿತಿಯಲ್ಲಿಯಲ್ಲಿದ್ದಾರೆ. ಅವರ ದೇಹ ಭಾಷೆ ಏನು ಅನ್ನೋದು ಅರ್ಥವಾಗುತ್ತದೆ. ನಾನು ಸಚಿನ್, ಅಖ್ತರ್ ಬೌಲಿಂಗ್ಗೆ ಹೆದರುತ್ತಿದ್ದರು ಎಂದು ಹೇಳುತ್ತಿಲ್ಲ. ಆದರೆ, ಅಖ್ತರ್ರ ಕೆಲ ಸ್ಪೆಲ್ಗಳು ಸಚಿನ್ರನ್ನು ಮಾತ್ರವಲ್ಲ, ವಿಶ್ವದ ಇತರೆ ಅತ್ಯುತ್ತಮ ಬ್ಯಾಟ್ಸ್ಮನ್ಗಳನ್ನು ಹೆದರಿಸುತ್ತಿದ್ದವು ಎಂದಿದ್ದಾರೆ.
ಸಚಿನ್, ಅಖ್ತರ್ಗೆ ಮಾತ್ರವಲ್ಲ, ಸ್ಪಿನ್ನರ್ ಸಯೀದ್ ಅಜ್ಮಲ್ ಬೌಲಿಂಗ್ ವಿರುದ್ಧ ಆಡುವುದಕ್ಕೂ ಪರದಾಡುತ್ತಿದ್ರು. ಇನ್ನು ಅಖ್ತರ್ಗೆ ಹೆದರುತ್ತಿದ್ದದ್ದು ಮಾತ್ರ ನಿಜ. ಇದನ್ನು ಅವರು ಒಪ್ಪಿಕೊಳ್ಳುವುದಿಲ್ಲ. ಅವರಷ್ಟೇ ಅಲ್ಲ, ಇತರೆ ಬ್ಯಾಟ್ಸ್ಮನ್ಗಳು ಕೂಡ ಅಖ್ತರ್ ವಿರುದ್ಧ ಆಡಲು ಭಯಪಡುತ್ತಿದ್ದರು ಎಂದು ಆಫ್ರಿದಿ ಬಡಾಯಿ ಕೊಚ್ಚಿಕೊಂಡಿದ್ದಾರೆ.