ಮುಂಬೈ :ಟೆಸ್ಟ್ ಹಾಗೂ ಏಕದಿನ ಕ್ರಿಕೆಟ್ನಲ್ಲಿ ಅತಿ ಹೆಚ್ಚು ರನ್ಗಳಿಸಿರುವ ಬ್ಯಾಟ್ಸ್ಮನ್ ಆಗಿರುವ ಸಚಿನ್ ತೆಂಡೂಲ್ಕರ್ ಅವರು ಎರಡು ಮಾದರಿಯ ಕ್ರಿಕೆಟ್ನಲ್ಲಿ ಹೆಚ್ಚು ಶತಕಗಳಿಸಿದ ದಾಖಲೆಯನ್ನು ಹೊಂದಿದ್ದಾರೆ.
ಆದರೆ, ವಿಶ್ವದಲ್ಲೇ ಅತಿ ಹೆಚ್ಚು(200) ಟೆಸ್ಟ್ ಪಂದ್ಯಗಳನ್ನಾಡಿದ ದಾಖಲೆ ಹೊಂದಿರುವ ಸಚಿನ್ ತೆಂಡೂಲ್ಕರ್ ಟೆಸ್ಟ್ ಕ್ರಿಕೆಟ್ನಲ್ಲಿ ಒಂದು ತ್ರಿಶತಕ ಸಿಡಿಸಿಲ್ಲ. ಇನ್ನು, ದ್ವಿಶತಕದ ವಿಚಾರಕ್ಕೆ ಬಂದರೆ ಕೇವಲ 6 ಮಾತ್ರ ಸಿಡಿಸಿದ್ದಾರೆ. ಹೆಚ್ಚು ದ್ವಿಶತಕ ಸಿಡಿಸಿರುವ ಪಟ್ಟಿಯಲ್ಲಿ ಅವರು 12ನೇ ಆಟಗಾರನಾಗಿದ್ದಾರೆ. ಇದಕ್ಕೆ ಕಾರಣವೇನು ಎನ್ನುವುದನ್ನ ಭಾರತಕ್ಕೆ ಚೊಚ್ಚಲ ವಿಶ್ವಕಪ್ ತಂಡಕೊಟ್ಟ ನಾಯಕ ಕಪಿಲ್ ದೇವ್ ತಿಳಿಸಿದ್ದಾರೆ.
ಸಚಿನ್ ಮತ್ತು ಸೆಹ್ವಾಗ್ ನಡುವಿನ ಹೋಲಿಕೆ ಮಾಡುವ ವಿಚಾರವಾಗಿ ಮಾತನಾಡಿದ ಅವರು, ಸಚಿನ್ರಂತಹ ಪ್ರತಿಭಾವಂತ ಕ್ರಿಕೆಟಿಗನನ್ನು ನಾವು ನೋಡಲು ಸಾಧ್ಯವಿಲ್ಲ. ಅವರು ಶತಕಗಳನ್ನು ಹೇಗೆ ಸಿಡಿಸಬೇಕೆಂಬ ಯುಗದಲ್ಲಿ ಜನಿಸಿದವರು. ಆದರೆ, ಅವರು ಎಂದಿಗೂ ನಿರ್ದಯಿ ಬ್ಯಾಟ್ಸ್ಮನ್ ಆಗಿರಲಿಲ್ಲ. ಸರಾಗವಾಗಿ ಶತಕ ಸಿಡಿಸುವ ಕಲೆಯನ್ನು ಕರಗತ ಮಾಡಿಕೊಂಡಿದ್ದ ಸಚಿನ್ಗೆ ಅದನ್ನು ದ್ವಿಶತಕ ಹಾಗೂ ತ್ರಿಶತಕಗಳನ್ನಾಗಿ ಹೇಗೆ ಪರಿವರ್ತಿಸಬೇಕು ಎಂದು ಗೊತ್ತಿರಲಿಲ್ಲ ಎಂದು ಮಾಜಿ ಕ್ರಿಕೆಟಿಗ ಡಬ್ಲ್ಯೂ ವಿ ರಾಮನ್ ನಡೆಸಿಕೊಟ್ಟ ಪೋಡ್ಕಾಸ್ಟ್ನಲ್ಲಿ ಕಪಿಲ್ ದೇವ್ ಹೇಳಿದ್ದಾರೆ.
ಸಚಿನ್ ಆ ಕಲೆಯನ್ನು ಹೊಂದಿದ್ದರೆ ಅವರ ಖಾತೆಯಲ್ಲಿ ಕಡಿಮೆಯೆಂದರೂ 5 ತ್ರಿಶತಕ ಹಾಗೂ 10ಕ್ಕೂ ಹೆಚ್ಚು ದ್ವಿಶತಕಗಳಿರುತ್ತಿದ್ದವು. ಅವರಿಗೆ ವೇಗಿಗಳಾಗಲಿ ಅಥವಾ ಸ್ಪಿನ್ನರ್ಗಳಿಗಾಗಲಿ ಪ್ರತಿ ಓವರ್ನಲ್ಲಿ ಬೌಂಡರಿ ಅಥವಾ ಸಿಕ್ಸರ್ ಬಾರಿಸಲು ಸಾಧ್ಯವಾಗುತ್ತಿರಲಿಲ್ಲ. ಅವರು ಮುಂಬೈ ಆಟಕ್ಕೆ ಮಾರು ಹೋಗಿದ್ದರು. ಶತಕ ಪೂರೈಸಿದ ನಂತರ ಮತ್ತೆ ಸೊನ್ನೆಯಿಂದ ಆಡುವ ಮನೋಭಾವ ಅವರದ್ದಾಗಿತ್ತು. ಆದರೆ, ಸೆಹ್ವಾಗ್ ಶತಕ ಸಿಡಿಸಿ ನಂತರ 20 ಓವರ್ ಆಡುವವರೆಗೆ ದ್ವಿಶತಕದ ಹತ್ತಿರ ಬರುತ್ತಿದ್ದರು ಎಂದು ಕಪಿಲ್ ದೇವ್ ವಿವರಿಸಿದ್ದಾರೆ.
ಭಾರತದ ಪರ ಟೆಸ್ಟ್ ಕ್ರಿಕೆಟ್ನಲ್ಲಿ 3 ತ್ರಿಶತಕ ದಾಖಲಾಗಿವೆ. ಅದರಲ್ಲಿ 2 ಸೆಹ್ವಾಗ್ ಹೆಸರಿನಲ್ಲಿದ್ದರೆ ಒಂದು ಕನ್ನಡಿಗ ಕರುಣ್ ನಾಯರ್ ಹೆಸರಿನಲ್ಲಿದೆ.