ಕೇಪ್ಟೌನ್ :8 ಆಟಗಾರರ 3 ತಂಡಗಳು ಒಂದೇ ಪಂದ್ಯದಲ್ಲಿ ಆಡುವ ವಿಶೇಷ 3ಟಿಸಿ ಕಪ್(ತ್ರೀ ಟೀಮ್ ಕ್ರಿಕೆಟ್) ಸಾಲಿಡಾರಿಟಿ ಕಪ್ನಿಂದ ವೇಗಿ ರಬಾಡ ಮತ್ತು ಆಲ್ರೌಂಡರ್ ಕ್ರಿಸ್ ಮೋರಿಸ್ ವೈಯಕ್ತಿಕ ಕಾರಣಗಳಿಂದ ಹಿಂದೆ ಸರಿದಿದ್ದಾರೆ.
ಕ್ರಿಕೆಟ್ ದಕ್ಷಿಣ ಆಫ್ರಿಕಾ ಬುಧವಾರ ಈ ವಿಚಾರವನ್ನು ಖಚಿತಪಡಿಸಿದ್ದು, ಮೊದಲ ಪಂದ್ಯದಲ್ಲಿ ಯಾರೆಲ್ಲ ಇರಲಿದ್ದಾರೆ ಎಂಬುದನ್ನು ಘೋಷಣೆ ಮಾಡಿದೆ.
ಕುಟಂಬದವರ ದುರಂತ ಸಾವಿನಿಂದಾಗಿ ರಬಾಡ ಮತ್ತು ಸಿಸದಾ ಮಗಾಲ ಸಾಲಿಡಾರಿಟಿ ಪ್ರಥಮ ಆವೃತ್ತಿಯಿಂದ ಹೊರಗುಳಿಯಲಿದ್ದಾರೆ. ಇನ್ನು ಕ್ರಿಸ್ ಮೋರಿಸ್ ವೈಯಕ್ತಿಕ ಕಾರಣದಿಂದ ಟೂರ್ನಿಯಲ್ಲಿ ಆಡುತ್ತಿಲ್ಲ ಎಂದು ಸಿಎಸ್ಎ ತಿಳಿಸಿದೆ.
ರಬಾಡ ಹಾಗೂ ಮಗಾಲ ಜಾಗಕ್ಕೆ ದಕ್ಷಿಣ ಆಫ್ರಿಕಾ ಮಾಜಿ ವೇಗಿ ಮಖಾಯ್ ಎನ್ಟಿನಿ ಅವರ ಪುತ್ರ ಥಾಂಡೋ ಎನ್ಟಿನಿ ಹಾಗೂ ಜೆರಾಲ್ಡ್ ಕೊಯೆಟ್ಜಿ ಕಿಂಗ್ಫಿಶರ್ಸ್ ತಂಡಕ್ಕೆ ಆಯ್ಕೆ ಮಾಡಲಾಗಿದೆ. ರಬಾಡ ಬದಲಿಗೆ ವಿಕೆಟ್ ಕೀಪರ್ ಹೆನ್ರಿಚ್ ಕ್ಲಾಸನ್ ಕಿಂಗ್ ಫೀಶರ್ ನಾಯಕತ್ವ ವಹಿಸಲಿದ್ದಾರೆ. ಇನ್ನು ಆಲ್ರೌಂಡರ್ ಕ್ರಿಸ್ ಮೋರಿಸ್ ಬದಲಿಗೆ ಜಾರ್ನ್ ಫಾರ್ಚುಯಿನ್ ಟೇಕ್ಲೋಟ್ ಈಗಲ್ಸ್ ತಂಡ ಸೇರಿಕೊಂಡಿದ್ದಾರೆ.
ದಕ್ಷಿಣ ಆಫ್ರಿಕಾದಲ್ಲಿ ಕೊರೊನಾ ವೈರಸ್ನಿಂದ ಸ್ಥಗಿತಗೊಂಡಿರುವ ಕ್ರಿಕೆಟ್, '3 ಟಿಸಿ ಸಾಲಿಡಾರಿಟಿ ಕಪ್‘ ಮೂಲಕ ಜುಲೈ 18ರಿಂದ ಪುನರಾರಂಭಗೊಳ್ಳುತ್ತಿದೆ. ಇದರಲ್ಲಿ ಎಬಿಡಿ, ಡಿಕಾಕ್ ಫಾಫ್ ಡು ಫ್ಲೆಸಿಸ್, ಪೆಹ್ಲುಕ್ವಾಯೋ ಸೇರಿದಂತೆ ಹಲವಾರು ಅಂತಾರಾಷ್ಟ್ರೀಯ ಕ್ರಿಕೆಟಿಗರು ಆಡುತ್ತಿದ್ದಾರೆ .