ವಿಶ್ವದಾದ್ಯಂತ ಕ್ರಿಕೆಟ್ ಆಟಕ್ಕೆ ಕೋಟ್ಯಂತರ ಅಭಿಮಾನಿಗಳಿದ್ದರೂ, ಅದನ್ನು ಒಂದು 'ಕ್ರೀಡೆ' ಎಂದು ಒಪ್ಪಿಕೊಳ್ಳಲು ಯುರೇಷಿಯಾದ ಬಲಾಢ್ಯ ದೇಶ ರಷ್ಯಾ ತಯಾರಿಲ್ಲ!
2019ರ ಐಸಿಸಿ ಕ್ರಿಕೆಟ್ ವಿಶ್ವಕಪ್ ನಡೆಯುತ್ತಿದ್ದ ಸಂದರ್ಭದಲ್ಲಿ ಕ್ರಿಕೆಟನ್ನು ದೇಶದ ಅಧಿಕೃತ ಕ್ರೀಡೆಯಾಗಿ ಗುರುತಿಸಬೇಕೆಂದು ರಷ್ಯಾದ ಕ್ರೀಡಾ ಸಚಿವಾಲಯಕ್ಕೆ ಮನವಿ ಮಾಡಲಾಗಿತ್ತು. ಆದರೆ, ಸಚಿವಾಲಯವು ದೇಶದಲ್ಲಿ ಕ್ರಿಕೆಟ್ಗೆ ಪ್ರಾದೇಶಿಕ ಸಂಬಂಧಗಳ ಕೊರತೆಯಿರುವುದರಿಂದ ಅದನ್ನು 'ಅಧಿಕೃತ ಕ್ರೀಡೆ' ಎಂದು ಗುರುತಿಸಬೇಕೆಂಬ ಮನವಿಯನ್ನು ತಿರಸ್ಕರಿಸಿತು.
ಕೆಲವೊಂದು ತಾಂತ್ರಿಕ ಕಾರಣಗಳಿಂದಾಗಿ, ಈ ಬಾರಿ ನಾವು ದಾಖಲೆಗಳನ್ನು ಸರಿಯಾಗಿ ಸಿದ್ಧಪಡಿಸಿರಲಿಲ್ಲ. ಮುಂದಿನ ಬಾರಿ ಸರಿಯಾದ ತಯಾರಿಯೊಂದಿಗೆ ತಮ್ಮ ದೇಶದ ಸಚಿವಾಲಯಕ್ಕೆ ಪುನಃ ಅರ್ಜಿ ಸಲ್ಲಿಸುತ್ತೇವೆ ಎಂದು ಮಾಸ್ಕೋ ಕ್ರಿಕೆಟ್ ಫೆಡರೇಷನ್ನ ಸದಸ್ಯ ಅಲೆಸ್ಕಂಡರ್ ಸೊಕೊರಿನ್ ಹೇಳಿದ್ದಾರೆ.
ಫುಟ್ಬಾಲ್, ಗಾಲ್ಫ್, ಯೋಗ ಹಾಗೂ ಮಾಡೆಲ್ ಪ್ಲೇನ್ ಫ್ಲೈಯಿಂಗನ್ನು ಅಧಿಕೃತ ಕ್ರೀಡೆ ಎಂದು ಗುರುತಿಸುವ ರಷ್ಯಾದಲ್ಲಿ ಕ್ರಿಕೆಟ್ ವಿರುದ್ಧದ ಈ ನಿರ್ಧಾರ ಹಲವರನ್ನು ಅಚ್ಚರಿಗೊಳಿಸಿದೆ.
ಐಸಿಸಿ ಪ್ರಕಾರ, 1870ರ ದಶಕದಲ್ಲಿ ರಷ್ಯಾದಲ್ಲಿ ಫಸ್ಟ್ ಕ್ಲಾಸ್ ಕ್ರಿಕೆಟ್ ಪಂದ್ಯಗಳನ್ನು ಸೇಂಟ್ ಪೀಟರ್ಸ್ಬರ್ಗ್ನಲ್ಲಿ ಆಡಿಸಲಾಗುತ್ತಿತ್ತು. ಆ ಸಮಯದಲ್ಲಿ ಕ್ರಿಕೆಟ್ ಈ ದೇಶದಲ್ಲಿ ನೆಲೆಯೂರಿತ್ತು. ಆದರೆ, 1971ರಲ್ಲಿ ನಡೆದ ಕಮ್ಯೂನಿಸ್ಟ್ ಕ್ರಾಂತಿಯಿಂದಾಗಿ ಇಲ್ಲಿ ಕ್ರಿಕೆಟ್ನ ಬೆಳವಣಿಗೆ ಕುಂಠಿತಗೊಂಡಿದೆ.
2018ರಲ್ಲಿ ಫಿಫಾ ವಿಶ್ವಕಪ್ ಆಯೋಜಿಸಿದ ರಷ್ಯಾದಲ್ಲಿ ಫುಟ್ಬಾಲ್, ಬಾಸ್ಕೆಟ್ ಬಾಲ್, ಐಸ್ ಹಾಕಿ ಹಾಗೂ ಜಿಮ್ನಾಸ್ಟಿಕ್ ಜನಪ್ರಿಯತೆ ಪಡೆದಿದೆ. ಒಲಿಂಪಿಕ್ ಕ್ರೀಡೆಗಳಿಗೂ ಮಹತ್ವ ನೀಡುವ ಈ ದೇಶಕ್ಕೆ ಹಲವು ಪದಕಗಳು ದಕ್ಕಿವೆ. ಆದರೆ ಸದ್ಯಕ್ಕೆ ಇಲ್ಲೂ ಕ್ರಿಕೆಟ್ ಅಭಿಮಾನಿಗಳು ಇರೋದ್ರಿಂದ ಕ್ರಿಕೆಟ್ಗೂ ಮಹತ್ವ ದೊರೆಯುವ ನಿರೀಕ್ಷೆಯಲ್ಲಿದ್ದಾರೆ.