ಶಾರ್ಜಾ: ಮಯಾಂಕ್ ಅಗರ್ವಾಲ್ ಶತಕ ಹಾಗೂ ಕೆಎಲ್ ರಾಹುಲ್ ಅರ್ಧಶತಕದ ನೆರವಿನಿಂದ ರಾಜಸ್ಥಾನ್ ರಾಯಲ್ಸ್ಗೆ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ 224 ರನ್ಗಳ ಬೃಹತ್ ಗುರಿ ನೀಡಿದೆ.
ಎರಡನೇ ಗೆಲುವಿನ ನಿರೀಕ್ಷೆಯಲ್ಲಿ ಟಾಸ್ ಸೋತು ಬ್ಯಾಟಿಂಗ್ ಇಳಿದ ಪಂಜಾಬ್ ತಂಡಕ್ಕೆ ಕರ್ನಾಟಕದ ಜೋಡಿಯಾದ ಮಯಾಂಕ್ ಅಗರ್ವಾಲ್ ಹಾಗೂ ರಾಹುಲ್ ಮೊದಲ ವಿಕೆಟ್ಗೆ 183 ರನ್ಗಳ ಬೃಹತ್ ಜೊತೆಯಾಟ ನೀಡಿದರು.
ರಾಜಸ್ಥಾನ್ ಬೌಲರ್ಗಳನ್ನು ಚೆಂಡಾಡಿದ ಈ ಜೋಡಿ ಕೇವಲ 16.3 ಓವರ್ಗಳ ತನಕ ವಿಕೆಟ್ ನೀಡದೆ ಬೌಂಡರಿ ಹಾಗೂ ಸಿಕ್ಸರ್ಗಳ ಸುರಿಮಳೆ ಸುರಿಸಿತು. 45 ಎಸೆತಗಳಲ್ಲಿ ಶತಕ ಸಿಡಿಸಿದ ಮಯಾಂಕ್, ಒಟ್ಟಾರೆ 50 ಎಸೆತಗಳಲ್ಲಿ 7 ಭರ್ಜರಿ ಸಿಕ್ಸರ್ ಹಾಗೂ 10 ಬೌಂಡರಿ ನೆರವಿನಿಂದ 106 ರನ್ಗಳಿಸಿ 17ನೇ ಓವರ್ನಲ್ಲಿ ಟಾಮ್ ಕರ್ರನ್ಗೆ ಔಟಾದರು. ಮಯಾಂಕ್ಗೆ ಸೂಕ್ತ ಬೆಂಬಲ ನೀಡಿದ ರಾಹುಲ್ 54 ಎಸೆತಗಳಲ್ಲಿ 7 ಬೌಂಡರಿ ಹಾಗೂ ಒಂದು ಸಿಕ್ಸರ್ ಸಹಿತ 69 ರನ್ಗಳಿಸಿ 18 ನೇ ಓವರ್ನಲ್ಲಿ ಅಂಕಿತ್ ರಜಪೂತ್ಗೆ ವಿಕೆಟ್ ಒಪ್ಪಿಸಿದರು.
ಕೊನೆಯ ಎರಡು ಓವರ್ಗಲ್ಲಿ ಅಬ್ಬರಿಸಿದ ನಿಕೋಲಸ್ ಪೂರನ್ ಕೇವಲ 8 ಎಸೆತಗಳಲ್ಲಿ 3 ಸಿಕ್ಸರ್ ಹಾಗೂ 1 ಬೌಂಡರಿ ಸಹಿತ 25 ಹಾಗೂ ಮ್ಯಾಕ್ಸ್ವೆಲ್ 9 ಎಸೆತಗಳಲ್ಲಿ 13 ರನ್ಗಳಿಸಿ ತಂಡದ ಮೊತ್ತವನ್ನು ಹೆಚ್ಚಿಸಿದರು.
20 ಓವರ್ಗಳಲ್ಲಿ ಪಂಜಾಬ್ ಕೇವಲ 2 ವಿಕೆಟ್ ಕಳೆದುಕೊಂಡು 223 ರನ್ಗಳಿಸಿತು. ಇದು ಐಪಿಎಲ್ ಇತಿಹಾಸದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ದಾಖಲಾದ 3ನೇ ಗರಿಷ್ಠ ಮೊತ್ತ ಹಾಗೂ ಯುಎಇನಲ್ಲಿ ದಾಖಲಾದ ಐಪಿಎಲ್ನ ಗರಿಷ್ಠ ಮೊತ್ತವಾಯಿತು.