ನವದೆಹಲಿ: ಚೊಚ್ಚಲ ಐಪಿಎಲ್ ಗೆದ್ದು 12 ವರ್ಷಗಳನ್ನು ಕಳೆದಿರುವ ರಾಜಸ್ಥಾನ ರಾಯಲ್ಸ್ ಮತ್ತೆ ತಂಡವನ್ನು ಪುನರ್ ರಚಿಸಿಕೊಂಡಿದ್ದು, ಯುವ ನಾಯಕತ್ವದ ಜೊತೆಗೆ ಕುಮಾರ್ ಸಂಗಕ್ಕಾರ ಅವರಂತಹ ಮಹಾನ್ ಕ್ರಿಕೆಟಿಗನ ಮಾರ್ಗದರ್ಶನದಲ್ಲಿ 2ನೇ ಪ್ರಶಸ್ತಿಯನ್ನು ಗೆಲ್ಲುವುದಕ್ಕೆ ಹಾತೊರೆಯುತ್ತಿದೆ.
ಕಳೆದ ವರ್ಷದ ಲೀಗ್ನಲ್ಲಿ ಕೊನೆಯ ಸ್ಥಾನಿಯಾಗಿದ್ದ ರಾಜಸ್ಥಾನ ರಾಯಲ್ಸ್, ಮ್ಯಾನೇಜ್ಮೆಂಟ್ ಮತ್ತು ತಂಡದಲ್ಲಿ ಪ್ರಮುಖ ಬದಲಾವಣೆ ಮಾಡಿಕೊಂಡಿದೆ. ಸ್ಟಿವ್ ಸ್ಮಿತ್ ಮತ್ತು ಕೋಚ್ ಆ್ಯಂಡ್ರ್ಯೂ ಮೆಕ್ಡೊನಾಲ್ಡ್ ಅವರನ್ನು ತಂಡದಿಂದ ಕೈಬಿಟ್ಟಿದೆ. ಇದೀಗ ಯುವ ವಿಕೆಟ್ ಕೀಪರ್ ಸಂಜು ಸಾಮ್ಸನ್ ನಾಯಕನಾಗಿದ್ದರೆ, ಶ್ರೀಲಂಕಾದ ಲೆಜೆಂಡ್ ಕುಮಾರ್ ಸಂಗಕ್ಕಾರರನ್ನು ಡೈರೆಕ್ಟರ್ ಆಫ್ ಕ್ರಿಕೆಟ್ ಆಗಿ ನೇಮಕ ಮಾಡಿದೆ.
ಜೊತೆಗೆ ತಂಡ ಕಳೆದ ಆವೃತ್ತಿಯಲ್ಲಿ ಜೋಫ್ರಾ ಆರ್ಚರ್ ಮೇಲೆ ಹೆಚ್ಚಾಗಿ ಅವಂಲಂಬಿವಾಗಿದ್ದರಿಂದ ಈ ಬಾರಿ 16.25 ಕೋಟಿ ರೂ. ನೀಡಿ ದಕ್ಷಿಣ ಆಫ್ರಿಕಾದ ಕ್ರಿಸ್ ಮೋರಿಸ್ ಅವರನ್ನು ತಂಡಕ್ಕೆ ಸೇರಿಸಿಕೊಂಡಿದೆ. ಇದು ಐಪಿಎಲ್ ಹರಾಜಿನ ಇತಿಹಾಸದಲ್ಲೇ ಗರಿಷ್ಠ ಮೊತ್ತದ ಖರೀದಿಯಾಗಿದೆ.
ತಂಡದ ಬಲ
ರಾಜಸ್ಥಾನ ರಾಯಲ್ಸ್ ಸ್ಫೋಟಕ ಬ್ಯಾಟ್ಸ್ಮನ್ಗಳ ದಂಡನ್ನೇ ಹೊಂದಿದೆ. ಜೋಶ್ ಬಟ್ಲರ್, ಬೆನ್ ಸ್ಟೋಕ್ಸ್ ಮ್ಯಾನ್ ವಿನ್ನರ್ಗಳಾದರೆ, ಸಾಮ್ಸನ್ ಯಾವುದೇ ಕ್ರಮಾಂಕದಲ್ಲಿ ಆಡಬಲ್ಲ ಪ್ರತಿಭೆಯಾಗಿದ್ದಾರೆ.
ಇವರ ಜೊತೆಗೆ ದಕ್ಷಿಣ ಆಫ್ರಿಕಾದ ಡೇವಿಡ್ ಮಿಲ್ಲರ್ ಮತ್ತು ಮೋರಿಸ್ ಅತ್ಯುತ್ತಮ ಸ್ಟೈಕರ್ಗಳಾಗಿದ್ದಾರೆ. ಇಂಗ್ಲೆಂಡ್ನ ಟಿ-20 ಸ್ಪೆಷಲಿಸ್ಟ್ ಲಿಯಾಮ್ ಲಿವಿಂಗ್ಸ್ಟೋನ್ ಕೂಡ ತಂಡಕ್ಕೆ ಕಮ್ಬ್ಯಾಕ್ ಮಾಡಿದ್ದಾರೆ. ಕಳೆದ ಆವೃತ್ತಿಯಲ್ಲಿ ಕ್ರಿಕೆಟ್ ಜಗತ್ತಿನ ಆಕರ್ಷಣೀಯವಾಗಿದ್ದ ರಾಹುಲ್ ತೆವಾಟಿಯಾ ಮಧ್ಯಮ ಕ್ರಮಾಂಕದ ಶಕ್ತಿಯಾಗಿದ್ದಾರೆ.
ಇವರಿಗೆ ಈ ಬಾರಿ ಸಾಕಷ್ಟು ಕ್ರಿಕೆಟ್ ಅನುಭವವುಳ್ಳ ಕುಮಾರ್ ಸಂಗಾಕ್ಕರರ ಮಾರ್ಗದರ್ಶನ ಸಿಗುತ್ತಿರುವುದರಿಂದ ತಂಡದಲ್ಲಿ ಹೊಸ ಅಲೆ ಎದ್ದಿದೆ. ಕರ್ನಾಟಕದ ಶ್ರೇಯಸ್ ಗೋಪಾಲ್, ಮೋರಿಸ್ ಹಾಗೂ ಮುಸ್ತಾಫಿಜುರ್ ರಹಮಾನ್ ಮಾತ್ರ ತಂಡದಲ್ಲಿರುವ ಬೌಲಿಂಗ್ ಅಸ್ತ್ರಗಳಾಗಿದ್ದಾರೆ.
ದೌರ್ಬಲ್ಯಗಳು
ರಾಯಲ್ಸ್ಗೆ ಸ್ಥಿರತೆಯುಳ್ಳ ಭಾರತೀಯ ಆಟಗಾರರ ಕೊರತೆ ಕಳೆದ ಕೆಲವು ವರ್ಷಗಳಿಂದಲೂ ಕಾಡುತ್ತಿದೆ. ಸಂಜು ಸಾಮ್ಸನ್ ಕೆಲವೊಂದು ಪಂದ್ಯಗಳಲ್ಲಿ ಅದ್ಭುತ ಪ್ರದರ್ಶನ ತೋರಿದರೂ ಅದೇ ಪ್ರದರ್ಶನವನ್ನು ಲೀಗ್ನುದ್ದಕ್ಕೂ ಕಾಪಾಡಿಕೊಳ್ಳಲು ವಿಫಲರಾಗುತ್ತಿದ್ದಾರೆ. ಇದು ಕಳೆದ 5 ವರ್ಷಗಳಿಂದಲೂ ಹೀಗೆ ಆಗುತ್ತಿದೆ. ಮನನ್ ವೊಹ್ರಾ ಉತ್ತಮ ಆಯ್ಕೆಯಾದರೂ ಸಿಕ್ಕ ಕೆಲವು ಅವಕಾಶಗಳಲ್ಲಿ ವಿಫಲರಾಗಿರುವ ಕಾರಣ ಅವರ ಮೇಲೆ ನಂಬಿಕೆ ಇಡುವುದು ಬಹಳ ಕಷ್ಟವಾಗಿದೆ.
ಇನ್ನು ಬೌಲಿಂಗ್ನಲ್ಲೂ ಭಾರತೀಯ ಬೌಲರ್ಗಳ ಕೊರತೆ ಎದ್ದು ಕಾಣುತ್ತಿದೆ. 2018ರಲ್ಲಿ ದುಬಾರಿಯಾಗಿದ್ದ ಜಯದೇವ್ ಉನಾದ್ಕಟ್ ಮೂರು ಆವೃತ್ತಿಯಿಂದಲೂ ವೈಫಲ್ಯ ಅನುಭವಿಸುತ್ತಿದ್ದಾರೆ. ಇನ್ನು ತಂಡದಲ್ಲಿರುವ ಶಿವಂ ದುಬೆ, ಯಶಸ್ವಿ ಜೈಸ್ವಾಲ್, ಕಾರ್ತಿಕ್ ತ್ಯಾಗಿ, ರಿಯಾನ್ ಪರಾಗ್ ಅವರಂತಹ ಯುವ ಆಟಗಾರರು ಕೆಲವು ಬಾರಿ ಆಕರ್ಷಕ ಪ್ರದರ್ಶನ ನೀಡಿದ್ದಾರಾದರೂ ಅವರಿಂದ ಸ್ಥಿರತೆಯ ಕೊರತೆ ಎದ್ದು ಕಾಣುತ್ತಿದೆ. ಜೊತೆಗೆ ಅನುಭವ ಕೂಡ ಸಾಲದಾಗಿದೆ.
ಇನ್ನು ತಂಡದ ಬೌಲಿಂಗ್ ಆಧಾರವಾಗಿದ್ದ ಜೋಫ್ರಾ ಆರ್ಚರ್ ಬೆರಳಿನ ಶಸ್ತ್ರಚಿಕಿತ್ಸೆಗೆ ಒಳಗಾಗಿರುವುದರಿಂದ ಐಪಿಎಲ್ಗೆ ಲಭ್ಯರಾಗುವ ಸಾಧ್ಯತೆ ಕೂಡ ಕಡಿಮೆಯಿದೆ. ಒಂದು ವೇಳೆ ಆರ್ಚರ್ ಅಲಭ್ಯರಾದರೆ ರಾಯಲ್ಸ್ಗೆ ತುಂಬಲಾರದ ನಷ್ಟವಾಗಲಿದೆ.
ರಾಜಸ್ಥಾನ್ ರಾಯಲ್ಸ್ ತಂಡ
ಸಂಜು ಸ್ಯಾಮ್ಸನ್ (ನಾಯಕ/ವಿಕೀ), ಜೋಸ್ ಬಟ್ಲರ್ (ವಿಕೀ), ಬೆನ್ ಸ್ಟೋಕ್ಸ್, ಯಶಸ್ವಿ ಜೈಸ್ವಾಲ್, ಮನನ್ ವೊಹ್ರಾ, ಅನುಜ್ ರಾವತ್, ರಿಯಾನ್ ಪರಾಗ್, ಡೇವಿಡ್ ಮಿಲ್ಲರ್, ರಾಹುಲ್ ತಿವಾಟಿಯಾ, ಮಹಿಪಾಲ್ ಲೋಮರ್, ಶ್ರೇಯಾಸ್ ಗೋಪಾಲ್, ಮಾಯಾಂಕ್ ಮಾರ್ಕಂಡೆ, ಜೋಫ್ರಾ ಆರ್ಚರ್, ಆಂಡ್ರ್ಯೂ ಟೈ, ಜಯದೇವ್ ಉನಾದ್ಕಟ್, ಕಾರ್ತಿಕ್ ತ್ಯಾಗಿ, ಶಿವಮ್ ದುಬೆ, ಕ್ರಿಸ್ ಮೋರಿಸ್, ಮುಸ್ತಾಫಿಜುರ್ ರಹಮಾನ್, ಚೇತನ್ ಸಕರಿಯಾ, ಕೆ.ಸಿ.ಕರಿಯಪ್ಪ, ಲಿಯಾಮ್ ಲಿವಿಂಗ್ಸ್ಟೋನ್, ಕುಲದೀಪ್ ಯಾದವ್, ಆಕಾಶ್ ಸಿಂಗ್.