ಆಕ್ಲೆಂಡ್: ಭಾರತದ ವಿರುದ್ಧ ಏಕದಿನ ಸರಣಿಯಲ್ಲಿ ಭಾರತಕ್ಕೆ ಕಬ್ಬಿಣದ ಕಡಲೆಯಾಗಿರುವ ರಾಸ್ ಟೇಲರ್ 2ನೇ ಏಕದಿನ ಪಂದ್ಯದ ವೇಳೆ ಮಹತ್ವದ ದಾಖಲೆಯೊಂದಕ್ಕೆ ಪಾತ್ರರಾಗಿದ್ದಾರೆ.
ಭಾರತ ತಂಡದ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಶತಕ ಬಾರಿಸಿ 348 ರನ್ಗಳ ದಾಖಲೆಯ ಜಯಕ್ಕೆ ಕಾರಣರಾಗಿದ್ದ ಟೇಲರ್, 2ನೇ ಏಕದಿನ ಪಂದ್ಯದಲ್ಲೂ ಅಜೇಯ 73 ರನ್ಗಳಿಸುವ ಮೂಲಕ ಭಾರತ ಮತ್ತು ನ್ಯೂಜಿಲ್ಯಾಂಡ್ ನಡುವಿನ ಕಾದಾಟದಲ್ಲಿ ಅತಿ ಹೆಚ್ಚು ರನ್ಗಳಿಸಿದ ಎರಡನೇ ಆಟಗಾರ ಎನಿಸಿಕೊಂಡರು. ಈಗಾಗಲೇ ಭಾರತದ ವಿರುದ್ಧ ಅತಿ ಹೆಚ್ಚು ರನ್ ಗಳಿಸಿರುವ ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದಾರೆ.
ಭಾರತ ಮತ್ತು ನ್ಯೂಜಿಲ್ಯಾಂಡ್ ನಡುವಿನ ದ್ವಿಪಕ್ಷೀಯ ಸರಣಿಯಲ್ಲಿ ಸಚಿನ್ ಅತಿ ಹೆಚ್ಚು ರನ್ಗಳಿಸಿದ ಬ್ಯಾಟ್ಸ್‌ಮನ್ ಆಗಿದ್ದಾರೆ. ಸಚಿನ್ 41 ಇನ್ನಿಂಗ್ಸ್ಗಳಲ್ಲಿ 1750 ರನ್ಗಳಿಸಿ ಮೊದಲ ಸ್ಥಾನದಲ್ಲಿದ್ದಾರೆ. ಟೇಲರ್ 34 ಇನ್ನಿಂಗ್ಸ್ಗಳಲ್ಲಿ 1373 ರನ್ಗಳಿಸಿ ಕೊಹ್ಲಿಯನ್ನು ಹಿಂದಿಕ್ಕಿ ಎರಡನೇ ಸ್ಥಾನ ಪಡೆದಿದ್ದಾರೆ. ಕೊಹ್ಲಿ 25 ಇನ್ನಿಂಗ್ಸ್ಗಳಲ್ಲಿ 1369 ರನ್ಗಳಿಸಿ 3ನೇ ಸ್ಥಾನದಲ್ಲಿದ್ದಾರೆ.
ಏಕದಿನ ಪಂದ್ಯದಲ್ಲಿ ಭಾರತದ ವಿರುದ್ಧ ಅತಿಹೆಚ್ಚು ಬಾರಿ 50ಕ್ಕಿಂತ ಹೆಚ್ಚು ರನ್ ಗಳಿಸಿದ ನ್ಯೂಜಿಲೆಂಡ್‌ನ ಬ್ಯಾಟ್ಸ್‌ಮನ್ ಆಗಿ ದಾಖಲೆಗೆ ಪಾತ್ರರಾಗಿದ್ದಾರೆ. ಟೇಲರ್ ಭಾರತದ ವಿರುದ್ಧ 3 ಶತಕ ಹಾಗೂ 8 ಅರ್ಧಶತಕ ಬಾರಿಸಿದ್ದಾರೆ. ಈ ಮೊದಲು ನಾಥನ್ ಆಸ್ಟೈ 10 ಬಾರಿ, ಮಾಜಿ ನಾಯಕ ಸ್ಟೀಫನ್ ಫ್ಲೇಮಿಂಗ್ ಹಾಗೂ ಹಾಲಿ ನಾಯಕ ವಿಲಿಯಮ್ಸನ್ 9 ಬಾರಿ 50ಕ್ಕಿಂತ ಹೆಚ್ಚು ರನ್ ಬಾರಿಸಿದ ದಾಖಲೆಗೆ ಪಾತ್ರರಾಗಿದ್ದಾರೆ.