ಆ್ಯಂಟಿಗೋವಾ: ಭಾರತ ತಂಡ ಸೀಮಿತ ಓವರ್ಗಳಲ್ಲಿ ಆರಂಭಿಕ ಸ್ಫೋಟಕ ದಾಂಡಿಗನಾಗಿ ಮಿಂಚುವ ರೋಹಿತ್ ಶರ್ಮಾ ಟೆಸ್ಟ್ ಕ್ರಿಕೆಟ್ನಲ್ಲಿ ಮಾತ್ರ ಅವಕಾಶಗಳ ಕೊರತೆ ಅನುಭವಿಸಿದ್ದಾರೆ.
ವಿಶ್ವಕಪ್ನಲ್ಲಿ ಭರ್ಜರಿ ಬ್ಯಾಟಿಂಗ್ ನಡೆಸಿದ್ದ ಅವರು 5 ದಾಖಲೆಯ ಶತಕ ಸಿಡಿಸಿ ಮಿಂಚಿದ್ದರು. ನಂತರ ವಿಂಡೀಸ್ ವಿರುದ್ಧದ ಟಿ20 ಸರಣಿಯಲ್ಲೂ ಉತ್ತಮ ಆಟ ತೋರಿಸಿದ್ದಾರೆ. ಇದೀಗ ಟೆಸ್ಟ್ ಸರಣಿಗೆ ಪೂರ್ವಭಾವಿಯಾಗಿ ನಡೆಯುತ್ತಿರುವ 3 ದಿನಗಳ ವಿಂಡೀಸ್ ಎ ವಿರುದ್ಧದ ಅಭ್ಯಾಸ ಪಂದ್ಯದಲ್ಲೂ ಅರ್ಧಶತಕ ಸಿಡಿಸಿ ಮಿಂಚಿದ್ದಾರೆ.
ಆಂತಾರಾಷ್ಟ್ರೀಯ ಕ್ರಿಕೆಟ್ಗೆ ಪದಾರ್ಪಣೆ ಮಾಡಿ 12 ವರ್ಷ ಕಳೆದಿದ್ದರೂ ರೋಹಿತ್ ಆಡಿರುವುದು ಕೇವಲ 27 ಟೆಸ್ಟ್ ಪಂದ್ಯಗಳು ಮಾತ್ರ. ಅದರಲ್ಲಿ 3 ಶತಕ 10 ಅರ್ಧಶತಕ ಬಾರಿಸಿದ್ದಾರೆ. 2013 ರಲ್ಲಿ ಟೆಸ್ಟ್ಗೆ ಪದಾರ್ಪಣೆ ಮಾಡಿದ ರೋಹಿತ್ ಟೆಸ್ಟ್ ತಂಡದಲ್ಲಿ ಖಾಯಂ ಸ್ಥಾನ ಪಡೆಯುವಲ್ಲಿ ಮಾತ್ರ ವಿಫಲರಾಗುತ್ತಿದ್ದಾರೆ.
ಕಳೆದ ಆಸ್ಟ್ರೇಲಿಯಾ ಪ್ರವಾಸದ ನಂತರ ಮತ್ತೆ ಟೆಸ್ಟ್ ಸರಣಿಯಲ್ಲಿ ಅವಕಾಶ ಪಡೆದಿದ್ದಾರೆ. ಆದರೆ, ಆಡುವ 11ರ ಬಳಗದಲ್ಲಿ ಅವಕಾಶ ಗಿಟ್ಟಿಸಿಕೊಳ್ಳುವರೇ ಎಂಬುದು ಅನುಮಾನವಾಗಿದೆ. 32 ವರ್ಷದ ರೋಹಿತ್ ಶರ್ಮಾ ಇನ್ನು 4-5 ವರ್ಷಗಳ ಕಾಲ ಕ್ರಿಕೆಟ್ ಆಡಲು ಶಕ್ತರಾಗಿರುವುದರಿಂದ ಮುಂದಾದರೂ ಟೆಸ್ಟ್ ಕ್ರಿಕೆಟ್ನಲ್ಲಿ ಖಾಯಂ ಸದಸ್ಯರಾಗುವರೇ ಎಂದು ಕಾದು ನೋಡಬೇಕಿದೆ.