ನವದೆಹಲಿ:ಕ್ರೀಡಾ ಕ್ಷೇತ್ರದಲ್ಲಿ ಅತ್ಯುನ್ನತ ಸಾಧನೆ ಮಾಡಿರುವ ಐವರಿಗೆ ಪ್ರಸಕ್ತ ಸಾಲಿನ ಪ್ರತಿಷ್ಠಿತ 'ರಾಜೀವ್ ಗಾಂಧಿ ಖೇಲ್ ರತ್ನ' ಪ್ರಶಸ್ತಿ ಲಭಿಸಿದೆ. ಕೇಂದ್ರ ಕ್ರೀಡಾ ಸಚಿವಾಲಯ ಪ್ರಶಸ್ತಿಗೆ ಅರ್ಹರಾದ ಕ್ರೀಡಾಳುಗಳ ಹೆಸರುಗಳನ್ನು ಪ್ರಕಟಿಸಿದೆ.
ಭಾರತ ಕ್ರಿಕೆಟ್ ತಂಡದ ಆರಂಭಿಕ ಬ್ಯಾಟ್ಸ್ಮನ್ ರೋಹಿತ್ ಶರ್ಮಾ, ಪ್ಯಾರಾ ಅಥ್ಲೀಟ್ ಮರಿಯಪ್ಪ.ಟಿ, ಟೇಬಲ್ ಟೆನ್ನಿಸ್ ಆಟಗಾರ್ತಿ ಮನಿಕಾ ಬತ್ರಿ, ಕುಸ್ತಿಪಟು ವಿನೇಶ್ ಪೋಗಾಟ್ ಹಾಗೂ ಹಾಕಿ ಆಟಗಾರ್ತಿ ರಾಣಿಗೆ ಈ ಗೌರವ ಸಂದಿದೆ.
ದ್ರೋಣಾಚಾರ್ಯ ಪ್ರಶಸ್ತಿ ಪುರಸ್ಕೃತರು:
ಬಿಲ್ಲುವಿದ್ಯೆ ಕೋಚ್ ಧರ್ಮೆಂದ್ರ ತಿವಾರಿ, ಅಥ್ಲೆಟಿಕ್ ಕೋಚ್ ಪುರುಷೋತ್ತಮ ರಾಯ್, ಬಾಕ್ಸಿಂಗ್ ಕೋಚ್ ಶಿವ ಸಿಂಗ್, ಹಾಕಿ ಕೋಚ್ ಕೃಷ್ಣಕುಮಾರ್ ಹೂಡಾ, ಪವರ್ ಲಿಫ್ಟಿಂಗ್ ಕೋಚ್ ವಿಜಯ್ ಬಾಲಚಂದ್ರ ಮುನೀಶ್ವರ್, ಟೆನ್ನಿಸ್ ಕೋಚ್ ನರೇಶ್ ಕುಮಾರ್ ಹಾಗೂ ಕುಸ್ತಿ ಕೋಚ್ ಓಂಪ್ರಕಾಶ್ ದಯಾ ಅವರಿಗೆ ದ್ರೋಣಾಚಾರ್ಯ ಗೌರವ ಸಂದಿದೆ.
ಕ್ರೀಡಾ ಕ್ಷೇತ್ರದಲ್ಲಿ ಕಳೆದ ನಾಲ್ಕು ವರ್ಷಗಳಲ್ಲಿ ಮಾಡಿರುವ ಸಾಧನೆಯನ್ನು ಗುರುತಿಸಿ ಈ ಪ್ರಶಸ್ತಿ ನೀಡಲಾಗಿದೆ. ವಿಶ್ವಕಪ್ನಲ್ಲಿ ಅದ್ಭುತ ಬ್ಯಾಟಿಂಗ್ ಪ್ರದರ್ಶನ ತೋರಿ 5 ಶತಕ ಬಾರಿಸಿದ್ದ ರೋಹಿತ್ ಶರ್ಮಾ, ಕುಸ್ತಿಪಟು ವಿನೇಶ್ ಪೋಗಟ್, ಟೇಬಲ್ ಟೆನ್ನಿಸ್ ಆಟಗಾರ್ತಿ ಮಾನಿಕ ಬಾತ್ರಾ ಹಾಗೂ 2016ರ ಪ್ಯಾರಾಲಿಂಪಿಕ್ಸ್ ಚಿನ್ನದ ಪದಕ ವಿಜೇತ ಮರಿಯಪ್ಪನ್ ತಂಗವೇಲು ಅವರ ಹೆಸರನ್ನು ವಿಶೇಷ ಆಯ್ಕೆ ಸಮಿತಿ ಕೇಂದ್ರ ಕ್ರೀಡಾ ಸಚಿವಾಲಯಕ್ಕೆ ಶಿಫಾರಸು ಮಾಡಿತ್ತು.