ದೆಹಲಿ:ಪ್ರವಾಸಿ ಬಾಂಗ್ಲಾದೇಶ ವಿರುದ್ಧದ ಮೊದಲನೇ ಟಿ20 ಪಂದ್ಯದಲ್ಲಿ ಆತಿಥೇಯರು ಹೀನಾಯ ಸೋಲನುಭವಿಸಿದ್ದರೂ ನಾಯಕ ರೋಹಿತ್ ಶರ್ಮಾ ಎರಡು ವಿಶೇಷ ದಾಖಲೆ ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ.
ವಿರಾಟ್ ಕೊಹ್ಲಿ ಅನುಪಸ್ಥಿತಿಯಲ್ಲಿ ತಂಡ ಮುನ್ನಡೆಸಿದ 'ಹಿಟ್ಮ್ಯಾನ್' ರೋಹಿತ್ ಶರ್ಮಾ, ಭಾರತದ ಪರ ಅತಿ ಹೆಚ್ಚು ಟಿ20 ಅಂತಾರಾಷ್ಟ್ರೀಯ ಪಂದ್ಯವಾಡಿದ ಆಟಗಾರ ಎನ್ನುವ ಕೀರ್ತಿಗೆ ಪಾತ್ರರಾಗಿದ್ದಾರೆ.
ಭಾನುವಾರ ಪಂದ್ಯದ ಮೂಲಕ 99 ಟಿ20 ಪಂದ್ಯವಾಡಿದ ರೋಹಿತ್, ಹಿರಿಯ ಆಟಗಾರ ಧೋನಿಯನ್ನು ಈ ವಿಚಾರದಲ್ಲಿ ಹಿಂದಿಕ್ಕಿದ್ದಾರೆ. ಧೋನಿ 98 ಟಿ20 ಅಂತಾರಾಷ್ಟ್ರೀಯ ಪಂದ್ಯವಾಡಿದ್ದಾರೆ.
ಸುಮಾರು 12 ವರ್ಷದ ಟಿ20 ಕರಿಯರ್ನಲ್ಲಿ ರೋಹಿತ್ ಶರ್ಮಾ 99 ಟಿ20 ಅಂತಾರಾಷ್ಟ್ರೀಯ ಪಂದ್ಯ ಆಡಿದ್ದಾರೆ. ಟಿ20 ಮಾದರಿಯಲ್ಲಿ ಪಾಕಿಸ್ತಾನ ಶೋಯೆಬ್ ಮಲಿಕ್ 11 ಪಂದ್ಯ ಆಡಿದ್ದು, ಅಗ್ರಸ್ಥಾನದಲ್ಲಿದ್ದಾರೆ. 99 ಪಂದ್ಯ ಆಡಿರುವ ಪಾಕಿಸ್ತಾನದ ಇನ್ನೋರ್ವ ಆಟಗಾರ ಶಾಹಿದ್ ಅಫ್ರಿದಿ ಶರ್ಮಾ ಜೊತೆಗ ಜಂಟಿಯಾಗಿ ಎರಡನೇ ಸ್ಥಾನದಲ್ಲಿದ್ದಾರೆ.
ಕೊಹ್ಲಿ ದಾಖಲೆ ಬ್ರೇಕ್:
ಬಾಂಗ್ಲಾ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ರೋಹಿತ್ ಗಳಿಕೆ ಕೇವಲ 9 ರನ್..! ಆದರೆ ಹಿಟ್ಮ್ಯಾನ್ 8 ರನ್ ಗಳಿಸಿದ ವೇಳೆ ವಿರಾಟ್ ಕೊಹ್ಲಿ ಹೆಸರಲ್ಲಿದ್ದ ದಾಖಲೆಯನ್ನು ತಮ್ಮ ಹೆಸರಿಗೆ ವರ್ಗಾಯಿಸಿಕೊಂಡಿದ್ದಾರೆ.
ಟಿ20 ಪಂದ್ಯದಲ್ಲಿ ಕೊಹ್ಲಿ ಒಟ್ಟಾರೆ 2450 ರನ್ ಗಳಿಸಿದ್ದರೆ, ಭಾನುವಾರ ಪಂದ್ಯದಲ್ಲಿ ರೋಹಿತ್ ಶರ್ಮಾ ಈ ಗಳಿಕೆಯನ್ನು ಹಿಂದಿಕ್ಕಿದ್ದಾರೆ. ಇನ್ನೂ ಎರಡು ಟಿ20 ಪಂದ್ಯಗಳು ಬಾಕಿ ಇದ್ದು, ರೋಹಿತ್ ಹೆಚ್ಚಿನ ಅಂತರ ಕಾಯ್ದುಕೊಳ್ಳುವ ಸಾಧ್ಯತೆ ಇದೆ.