ಮುಂಬೈ:ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಕ್ರಿಕೆಟ್ ಸರಣಿಯ ಮೂರನೇ ಹಾಗೂ ಅಂತಿಮ ಪಂದ್ಯದಲ್ಲಿ ಕಣಕ್ಕಿಳಿದ ಹಿಟ್ ಮ್ಯಾನ್ ರೋಹಿತ್ ಶರ್ಮಾ (71), ಕನ್ನಡಿಗ ಕೆ.ಎಲ್.ರಾಹುಲ್ (91), ನಾಯಕ ವಿರಾಟ್ ಕೊಹ್ಲಿ (70*) ಸಿಡಿಲಬ್ಬರದ ಅರ್ಧಶತಕಗಳ ನೆರವಿನಿಂದ ಭಾರತ ತಂಡ 67 ರನ್‌ಗಳ ಅಂತರದಿಂದ ಅಮೋಘ ಗೆಲುವು ದಾಖಲಿಸಿದೆ.
ಮೂರು ವಿಕೆಟ್ಗಳನ್ನು ಕಳೆದುಕೊಂಡಿದ್ದ ಟೀಂ ಇಂಡಿಯಾ, ಎದುರಾಳಿ ವಿಂಡೀಸ್‌ಗೆ 241 ರನ್‌ಗಳ ಟಾರ್ಗೆಟ್ ನೀಡಿತ್ತು. ಗುರಿ ಬೆನ್ನಟ್ಟಿದ್ದ ವೆಸ್ಟ್ ಇಂಡೀಸ್ 8 ವಿಕೆಟ್ ಕಳೆದುಕೊಂಡು 173 ರನ್ ಗಳಿಸಲಷ್ಟೇ ಶಕ್ತವಾಯಿತು. ಈ ಮೂಲಕ ಮೂರು ಪಂದ್ಯಗಳ ಟಿ20 ಸರಣಿಯನ್ನು ಭಾರತ 2-1ರ ಅಂತರದಲ್ಲಿ ಗೆದ್ದುಕೊಂಡಿತು.
ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ವೆಸ್ಟ್ ಇಂಡೀಸ್ ತಂಡ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಭಾರತ ತಂಡದ ಪರ ಇನ್ನಿಂಗ್ಸ್ ಆರಂಭಿಸಿದ ರೋಹಿತ್ ಶರ್ಮಾ ಕೇವಲ 34 ಎಸೆತಗಳಲ್ಲಿ 71 (6 ಬೌಂಡರಿ, 5 ಸಿಕ್ಸರ್) ಸಿಡಿಸಿದ್ರು. ಇವರಿಗೆ ಜೊತೆಯಾಗಿದ್ದ ರಾಹುಲ್ 56 ಎಸೆತಗಳಲ್ಲಿ 91 ರನ್ (9 ಬೌಂಡರಿ 4 ಸಿಕ್ಸರ್) ಬಾರಿಸಿದರು. ನಂತರ ಕ್ರೀಸಿಗೆ ಬಂದ ವಿರಾಟ್ ಕೊಹ್ಲಿ 29 ಎಸತೆಗಳಲ್ಲೇ 70 ರನ್ (7 ಸಿಕ್ಸರ್ ಹಾಗೂ 4 ಬೌಂಡರಿ) ಸಿಡಿಸಿದ ಪರಿಣಾಮ ರನ್ ಪರ್ವತವನ್ನೇ ಕಡೆದು ನಿಲ್ಲಿಸಿದ್ರು.
ರೋಹಿತ್ ಶರ್ಮಾ ಔಟಾದ ಬಳಿಕ ಬಂದ ರಿಷಬ್ ಪಂತ್ (0) ಖಾತೆ ತೆರೆಯಲಾಗದೆ ಪೆವಿಲಿಯನ್‌ಗೆ ಹಿಂತಿರುಗಿದರು. ಕೊನೆಯ ಹಂತದಲ್ಲಿ ಕೆ.ಎಲ್.ರಾಹುಲ್ ಅಬ್ಬರಕ್ಕೆ ನಾಯಕ ವಿರಾಟ್ ಕೊಹ್ಲಿ ಸಾಥ್ ಕೊಟ್ಟರು. ರೋಹಿತ್‌ಗಿಂತಲೂ ಬಿರುಸಾಗಿ ಬ್ಯಾಟ್ ಬೀಸಿದ ಕಿಂಗ್ ಕೊಹ್ಲಿ ಕೇವಲ 21 ಎಸೆತಗಳಲ್ಲೇ 50ರ ರೇಖೆ ದಾಟಿದರು. ಈ ಮೂಲಕ 240 ರನ್ನತ್ತ ಕೊಂಡೊಯ್ದರು.
ಬೃಹತ್ ರನ್‌ಗಳ ಗುರಿಯನ್ನು ಬೆನ್ನಟ್ಟಿದ ವೆಸ್ಟ್ ಇಂಡೀಸ್, ಟೀಂ ಇಂಡಿಯಾ ಬೌರಲ್ಗಳ ಅಬ್ಬರಕ್ಕೆ ಆರಂಭದಲ್ಲೇ ಆಘಾತ ಅನುಭವಿಸಿತು. 12 ರನ್ ಗಳಿಸಿದ್ದಾಗಲೇ ಬ್ರೆಂಡನ್ ಕಿಂಗ್ (5) ಪೆವಿಲಿಯನ್ನತ್ತ ಮುಖ ಮಾಡಿದರು. ಬಳಿಕ ತಂಡದ ಮೊತ್ತ 17 ರನ್ ಇದ್ದಾಗ ಲೆಂಡ್ಲ್ ಸಿಮನ್ಸ್ (7), ನಿಕೋಲಸ್ ಪೂರನ್ (0) ಔಟಾದರು.
ಸೋಲಿನ ಸುಳಿಯಲ್ಲಿ ಸಿಲುಕಿದ್ದ ಸಂದರ್ಭದಲ್ಲಿ ನಾಯಕ ಕಿರಾನ್ ಪೊಲಾರ್ಡ್ (68), ಶಿಮ್ರಾನ್ ಹೆಟ್ಮೆಯರ್ (41) ಬಿರುಸಿನ ಬ್ಯಾಟಿಂಗ್ ಮೂಲಕ ತಂಡವನ್ನು ಗೆಲುವಿನತ್ತ ಕೊಂಡೊಯ್ಯಲು ಪ್ರಯತ್ನಿಸಿದರು. ಆದರೆ, ದೀಪಕ್ ಚಾಹರ್ ಅವರಿಬ್ಬರ ಜೊತೆಯಾಟಕ್ಕೆ ಬ್ರೇಕ್ ಕೊಟ್ಟರು. ಈ ಇಬ್ಬರ ಅಬ್ಬರ ಬಿಟ್ಟರೆ ಉಳಿದವರು ಪ್ರದರ್ಶನ ಹೇಳಿಕೊಳ್ಳುವಷ್ಟಿರಲಿಲ್ಲ. ಭಾರತ ತಂಡದ ಪರ ದೀಪಕ್ ಚಾಹರ್, ಭುವನೇಶ್ವರ್, ಮೊಹಮ್ಮದ್ ಶಮಿ ಹಾಗೂ ಕುಲದೀಪ್ ಯಾದವ್ ತಲಾ ಎರಡು ವಿಕೆಟ್ ಪಡೆದುಕೊಂಡರು.
ಕೆ.ಎಲ್.ರಾಹುಲ್ ಪಂದ್ಯ ಶ್ರೇಷ್ಠ, ನಾಯಕ ವಿರಾಟ್ ಕೊಹ್ಲಿ ಸರಣಿ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.