ಮುಂಬೈ:ಭಾರತ ತಂಡದ ಉಪನಾಯಕ ರೋಹಿತ್ ಶರ್ಮಾ 2019ರಲ್ಲಿ ವಿಶ್ವಕಪ್ನಲ್ಲಿ 5 ಶತಕ ಸಿಡಿಸಿದ್ದರು. ಅಭಿಮಾನಿಗಳೊಂದಿಗೆ ನಡೆಸಿದ ಟ್ವಿಟರ್ ಚಾಟ್ ವೇಳೆ ತಮ್ಮ ನೆಚ್ಚಿನ ಶತಕ ಯಾವುದೆಂದು ಬಹಿರಂಗ ಪಡಿಸಿದ್ದಾರೆ.
2019ರ ವಿಶ್ವಕಪ್ನಲ್ಲಿ ರೋಹಿತ್ ಶರ್ಮಾ ಅದ್ಭುತ ಪ್ರದರ್ಶನ ತೋರಿದ್ದರು. ಟೂರ್ನಿಯಲ್ಲಿ 5 ಶತಕಗಳ ಸಹಿತ 647 ರನ್ಗಳಿಸುವ ಮೂಲಕ ಗರಿಷ್ಠ ಸ್ಕೋರರ್ ಎನಿಸಿಕೊಂಡಿದ್ದರು. ಜೊತೆಗೆ ವಿಶ್ವಕಪ್ ಇತಿಹಾಸದಲ್ಲೇ ಹೆಚ್ಚು ಶತಕ ಸಿಡಿಸಿದ ಬ್ಯಾಟ್ಸ್ಮನ್ ಎಂಬ ವಿಶ್ವದಾಖಲೆಗೆ ಪಾತ್ರರಾಗಿದ್ದರು.
ಭಾನುವಾರ #askro ಎಂಬ ಹ್ಯಾಸ್ಟ್ಯಾಗ್ನೊಂದಿಗೆ ಅಭಿಮಾನಿಗಳ ಪ್ರಶ್ನೆಗೆ ರೋಹಿತ್ ಉತ್ತರಿಸಿದರು. ಈ ವೇಳೆ ಅಭಿಮಾನಿಯೊಬ್ಬ ವಿಶ್ವಕಪ್ನಲ್ಲಿ ನೀವು ಸಿಡಿಸಿದ 5 ಶತಕಗಳಲ್ಲಿ ಯಾವುದು ನಿಮ್ಮ ನೆಚ್ಚಿನ ಶತಕ ಮತ್ತು ಏಕೆ ಎಂದು ಪ್ರಶ್ನೆ ಕೇಳಿದ್ದರು.
ಇದಕ್ಕೆ ಉತ್ತರಿಸಿದ ರೋಹಿತ್ ಶರ್ಮಾ, "ಟೂರ್ನಿಯಲ್ಲಿ ನನ್ನ ನೆಚ್ಚಿನ ಶತಕವೆಂದರೆ ಮೊದಲ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ದಾಖಲಿಸಿದ್ದು. ಯಾಕೆಂದರೆ, ಆ ಪಂದ್ಯದಲ್ಲಿ ಕಡಿಮೆ ಮೊತ್ತದ ಗುರಿ ಪಡೆದಿದ್ದರೂ, ನಮಗೆ ಬೆನ್ನಟ್ಟುವುದು ಸವಾಲಿನ ಕೆಲಸವಾಗಿತ್ತು. ಅವರ ಬೌಲಿಂಗ್ ದಾಳಿ ಕೂಡ ಉತ್ತಮವಾಗಿತ್ತು" ಎಂದು ಹಿಟ್ಮ್ಯಾನ್ ವಿವರಿಸಿದ್ದಾರೆ.
ಇನ್ನು, ಸಿಕ್ಸರ್ ಹೊಡೆಯುವುದರಲ್ಲಿ ಹಾರ್ದಿಕ್ ಪಾಂಡ್ಯ, ಪೊಲಾರ್ಡ್, ಕ್ರಿಸ್ ಲಿನ್ ಹಾಗೂ ನಿಮ್ಮ ನಡುವೆ ಸ್ಪರ್ಧೆಯನ್ನು ನಾವು ನೋಡಬಹುದೇ ಎಂಬ ಮುಂಬೈ ಇಂಡಿಯನ್ಸ್ ಪ್ರಶ್ನೆಗೆ ಉತ್ತರಿಸಿದ ರೋಹಿತ್, "ನಾನು ಅವರೊಂದಿಗೆ ಸ್ಪರ್ಧಿಸಲಾಗುವುದಿಲ್ಲ. ಅವರು ನನಗಿಂತ ಬಲಿಷ್ಠರಾಗಿದ್ದಾರೆ. ಬೌಂಡರಿ ಬಾರಿಸುವುದಕ್ಕೆ ಹಾಗೂ ಈ ಹಾದಿಯಲ್ಲಿ ಕೆಲವು ಸಿಕ್ಸರ್ ಸಿಡಿಸುವುದಕ್ಕೆ ನನಗೆ ಸಂತೋಷವಿದೆ " ಎಂದಿದ್ದಾರೆ.
ಇದೇ ಸಂದರ್ಭದಲ್ಲಿ ಅಭಿಮಾನಿ ಕೇಳಿದ್ದಕ್ಕೆ ತಮ್ಮ ಮೊದಲ ಸಂಪಾದನೆ 50 ರೂ. ಎಂದು ಬಹಿರಂಗಪಡಿಸಿದ್ದಾರೆ. ಜೊತೆಗೆ ಅದನ್ನು ಸ್ನೇಹಿತರೊಂದಿಗೆ ವಡಾ-ಪಾವ್ ತಿನ್ನಲು ಬಳಸಿದ್ದೆ ಎಂದು ತಿಳಿಸಿದ್ದಾರೆ.