ಕರ್ನಾಟಕ

karnataka

ETV Bharat / sports

ರೋಹಿತ್-ರಾಹುಲ್​ ಭರ್ಜರಿ ಶತಕ, ಕುಲದೀಪ್‌ ಹ್ಯಾಟ್ರಿಕ್ ಮೋಡಿ​.. ಇಂಡಿಯಾಗೆ 107 ರನ್​​ಗಳ ಜಯ.. - ರೋಹಿತ್- ​ರಾಹುಲ್​ ಶತಕ, ಕುಲದೀಪ್​​​ಗೆ ಹ್ಯಾಟ್ರಿಕ್​.

ಸರಣಿ ಉಳಿಸಿಕೊಳ್ಳಲು ಗೆಲ್ಲಲೇಬೇಕಾದ ಪಂದ್ಯದಲ್ಲಿ  ಬ್ಯಾಟ್ಸ್​​​ಮನ್​​​ಗಳ ಅಬ್ಬರದ ಬ್ಯಾಟಿಂಗ್​ನಿಂದಾಗಿ 2ನೇ ಏಕದಿನ ಪಂದ್ಯದಲ್ಲಿ ವಿಂಡೀಸ್​ ವಿರುದ್ಧ ಟೀಂ ಇಂಡಿಯಾ 107 ರನ್​​​ಗಳ ಭರ್ಜರಿ ಜಯ ದಾಖಲಿಸಿದೆ.

By

Published : Dec 18, 2019, 4:30 PM IST

Updated : Dec 18, 2019, 11:41 PM IST

ವಿಶಾಖಪಟ್ಟಣ:ಸರಣಿ ಉಳಿಸಿಕೊಳ್ಳಲು ಗೆಲ್ಲಲೇಬೇಕಾದ ಪಂದ್ಯದಲ್ಲಿ ಬ್ಯಾಟ್ಸ್​​​ಮನ್​​​ಗಳ ಅಬ್ಬರದ ಬ್ಯಾಟಿಂಗ್​ನಿಂದಾಗಿ 2ನೇ ಏಕದಿನ ಪಂದ್ಯದಲ್ಲಿ ವಿಂಡೀಸ್​ ವಿರುದ್ಧ ಟೀಂ ಇಂಡಿಯಾ 107 ರನ್​​​ಗಳ ಭರ್ಜರಿ ಜಯ ದಾಖಲಿಸಿದೆ. ವಿಂಡೀಸ್​ ವಿರುದ್ಧ 5ನೇ ಅತಿ ಹೆಚ್ಚು ರನ್​ಗಳ ಅಂತರದಿಂದ ಗೆದ್ದ ದಾಖಲೆಯೂ ಬರೆಯಿತು. 3 ಏಕದಿನ ಪಂದ್ಯಗಳ ಸರಣಿಯಲ್ಲಿ 1-1 ಸಮಬಲಗೊಂಡಿದೆ.

ಟಾಸ್​ ಸೋತು ಬ್ಯಾಟಿಂಗ್‌ಗೆ ಇಳಿದ ಭಾರತ ತಂಡಕ್ಕೆ ರಾಹುಲ್​-ರೋಹಿತ್ ಮೊದಲ ವಿಕೆಟ್​ ಜೊತೆಯಾಟದಲ್ಲಿ​ 227 ರನ್​ ಸೇರಿಸಿದರು. 104 ಎಸೆತಗಳಲ್ಲಿ 3 ಸಿಕ್ಸರ್​ ಹಾಗೂ 8 ಬೌಂಡರಿ ಸಹಿತ 102 ರನ್​ಗಳಿಸಿದ ರಾಹುಲ್,​ ಅಲ್ಜಾರಿ ಜೋಸೆಫ್​ಗೆ ವಿಕೆಟ್​ ಒಪ್ಪಿಸಿದರು. ನಂತರದ ಓವರ್​ನಲ್ಲೇ ಭಾರತ ತಂಡದ ನಾಯಕ ವಿರಾಟ್​ ಕೊಹ್ಲಿ ಪೊಲಾರ್ಡ್​ ಬೌಲಿಂಗ್​ನಲ್ಲಿ ಗೋಲ್ಡನ್​ ಡಕ್​ ಆದರು.

ಆದರೆ, ತನ್ನ ಅಬ್ಬರದ ಬ್ಯಾಟಿಂಗ್​ ಮುಂದುವರಿಸಿದ ರೋಹಿತ್​ 138 ಎಸೆತಗಳಲ್ಲಿ 17 ಬೌಂಡರಿ ಹಾಗೂ 5 ಭರ್ಜರಿ ಸಿಕ್ಸರ್​ ಸಹಿತ 159 ರನ್​ಗಳಿಸಿ ಕಾಟ್ರೆಲ್​ಗೆ ವಿಕೆಟ್ ​ಒಪ್ಪಿಸಿದರು. ಈ ಮೂಲಕ ಸತತ 7ನೇ ವರ್ಷವೂ ಭಾರತದ ಪರ ಹೆಚ್ಚು ರನ್​ಗಳಿಸಿದ ಬ್ಯಾಟ್ಸ್​ಮನ್​ ಎನಿಸಿಕೊಂಡರು.

27 ಎಸೆತಗಳಲ್ಲಿ 73 ರನ್​ ಸಿಡಿಸಿದ ಪಂತ್​-ಶ್ರೇಯಸ್ ಅಯ್ಯರ್​:ರೋಹಿತ್​ ಶರ್ಮಾ ಔಟಾದ ನಂತರ ಜೊತೆಯಾದ ಪಂತ್​ ಹಾಗೂ ಅಯ್ಯರ್​ ವಿಂಡೀಸ್ ಬೌಲರ್​ಗಳನ್ನ ಚೆಂಡಾಡಿದರು. ಈ ಜೋಡಿ 27 ಎಸೆತಗಳಲ್ಲಿ 73 ರನ್​ಗಳ ಜೊತೆಯಾಟ ನೀಡಿದರು. ಪಂತ್​ ಕೇವಲ 16 ಎಸೆತಗಳಲ್ಲಿ 4 ಭರ್ಜರಿ ಸಿಕ್ಸರ್ ಹಾಗೂ 3 ಬೌಂಡರಿ ಸಹಿರ 39 ರನ್​ಗಳಿಸಿದರೆ, ಶ್ರೇಯಸ್​ ಅಯ್ಯರ್​ 32 ಎಸೆತಗಳಲ್ಲಿ 3 ಬೌಂಡರಿ 4 ಸಿಕ್ಸರ್ ಸಹಿತ 53 ರನ್​ಗಳಿಸಿದರು. ​ಕೇದಾರ್​ ಜಾದವ್​ 16 ರನ್​ಗಳಿಸಿದರು. ಉತ್ತಮ ಪ್ರದರ್ಶನ ತೋರಿದ ಟೀಂ ಇಂಡಿಯಾ ವಿಂಡೀಸ್​ಗೆ 388 ರನ್​ಗಳ ಬೃಹತ್​ ಮೊತ್ತದ ಟಾರ್ಗೆಟ್​ ನೀಡಿತ್ತು.

ಬೃಹತ್​ ಗುರಿಯನ್ನು ಬೆನ್ನಟ್ಟಿದ ವಿಂಡೀಸ್​ ಆರಂಭದಲ್ಲೇ ಉತ್ತಮ ಇನ್ನಿಂಗ್ಸ್​ ಕಟ್ಟುವಲ್ಲಿ ವಿಫಲವಾಯ್ತು. ತಂಡದ ಮೊತ್ತ 61 ತಲುಪುತ್ತಿದ್ದಂತೆ ಆರಂಭಿಕ ಆಟಗಾರ ಎವಿನ್​ ಲೆವಿಸ್​​ (28) ವೇಗಿ ಶಾರ್ದೂಲ್​ ಠಾಕೂರ್​​ಗೆ ವಿಕೆಟ್​ ಒಪ್ಪಿಸಿದರು. ಕಳೆದ ಪಂದ್ಯದಲ್ಲಿ ಶತಕ ಬಾರಿಸಿ ಗೆಲುವಿನ ರೂವಾರಿಯಾಗಿದ್ದ ಶಿಮ್ರಾನ್​​ ಹೆಟ್ಮೆಯರ್​ (4)​ ಕ್ರೀಸ್​ನಲ್ಲಿ ಹೆಚ್ಚು ಹೊತ್ತು ನಿಲ್ಲಲಿಲ್ಲ. ಬಳಿಕ ರೋಸ್ಟನ್​ ಚೇಸ್​ (4) ಕೂಡ ಜಡೇಜಾಗೆ ಬೌಲ್ಡ್​ ಆದರು.

ಮೊದಲ ಏಕದಿನ ಪಂದ್ಯದಲ್ಲಿ ಶತಕ ಬಾರಿಸಿ ಮಿಂಚಿದ ಶೈ ಹೋಪ್​ ಈ ಪಂದ್ಯದಲ್ಲೂ ಮಿಂಚಿದರು. ಒಂದೆಡೆ ವಿಕೆಟ್​ಗಳು ಪತನಗೊಳ್ಳುತ್ತಿದ್ದರೂ ತನ್ನ ತಾಳ್ಮೆಯುತ ಆಟವಾಡುತ್ತಾ ಪಂದ್ಯವನ್ನು ಗೆಲ್ಲಿಸಲೇಬೇಕು ಎಂಬ ಹಂಬಲದಲ್ಲಿದ್ದ ಹೋಪ್​ಗೆ ಮತ್ತಷ್ಟು ಹೋಪ್​ ಕೊಟ್ಟಿದ್ದು ನಿಕೋಲಸ್​​​ ಪೂರನ್​​​.

ಕ್ರೀಸ್​​ಗೆ ಬಂದ ಪೂರನ್​​ 6 ಬೌಂಡರಿ 6 ಸಿಕ್ಸರ್​ ಬಾರಿಸಿ ಕೇವಲ ​47 ಎಸೆತಗಳಲ್ಲಿ 75 ರನ್​​ಗಳಿಸಿದ್ದರು. ಇತ್ತ ಹೋಪ್​ 78 ರನ್​​ಗಳಿಸಿ ತಂಡವನ್ನು ಗೆಲುವಿನತ್ತ ಕೊಂಡೊಯ್ಯುತ್ತಿದ್ದರು. ಆದರೆ, ಮೊಹಮ್ಮದ್​​ ಶಮಿ ಈ ಇಬ್ಬರ ಉತ್ತಮ ಜೊತೆಯಾಟಕ್ಕೆ ಬ್ರೇಕ್​​ ನೀಡಿದರು. ನಂತರ ನಾಯಕ ಕಿರಾನ್​ ಪೊಲಾರ್ಡ್​​​ ಗೋಲ್ಡಕ್​ ಡಕ್​ ಆದರು. ವಿಕೆಟ್​​ಗಳನ್ನು ಕಳೆದುಕೊಳ್ಳುತ್ತಿದ್ದಂತೆ ವೇಗವಾಗಿ ಬ್ಯಾಟ್​​ ಬೀಸಲು ಮುಂದಾದ ಹೋಪ್(78)​​​, ಕುಲದೀಪ್​​ಗೆ ವಿಕೆಟ್​ ಒಪ್ಪಿಸಿದರು. ಬಳಿಕ ಬೌಲರ್​ ಕಿಮೋ ಪೌಲ್ 4 ಬೌಂಡರಿ, 3 ಸಿಕ್ಸರ್​ ಬಾರಿಸಿ 46 ರನ್​ ಗಳಿಸಿದರು. ಕೊನೆಯದಾಗಿ ತನ್ನೆಲ್ಲಾ ವಿಕೆಟ್​ಗಳನ್ನು ಕಳೆದುಕೊಂಡ ವಿಂಡೀಸ್​​ 280 ರನ್​ ಗಳಿಸಲಷ್ಟೇ ಶಕ್ತವಾಯ್ತು.

ವಿಂಡೀಸ್​ ಪರ ಕಾಟ್ರೆಲ್​ 83 ರನ್​ ನೀಡಿ 2 ವಿಕೆಟ್​, ಕೀಮೋ ಪಾಲ್​ 57ಕ್ಕೆ 1, ಜೋಸೆಪ್​ 68ಕ್ಕೆ 1 ಪೊಲಾರ್ಟ್​ 2 ಓವರ್​ಗಳಲ್ಲಿ 20 ರನ್​ ನೀಡಿ 1 ವಿಕೆಟ್​ ಪಡೆದರು. ಭಾರತದ ಪರ ಮೊಹಮ್ಮದ್​ ಶಮಿ, ಕುಲದೀಪ್​ಗೆ ತಲಾ 3, ಜಡೇಜಾಗೆ 2, ಠಾಕೂರ್​ಗೆ 1 ವಿಕೆಟ್​​ ಬಿದ್ದಿವೆ.

ಕುಲದೀಪ್​ಗೆ ಹ್ಯಾಟ್ರಿಕ್​:ತಾಳ್ಮೆಯುತ ಆಟದ ಮೂಲಕ ತಂಡವನ್ನು ಗೆಲುವಿನತ್ತ ಕೊಂಡೊಯ್ಯುತ್ತಿದ್ದ ಶೈ ಹೋಪ್​​ ಕುಲದೀಪ್​ ಬೌಲಿಂಗ್​ನ 32ನೇ ಓವರ್​ 4ನೇ ಎಸೆತದಲ್ಲಿ ಭಾರೀ ಹೊಡೆತಕ್ಕೆ ಮುಂದಾಗಿ ನಾಯಕ ಕೊಹ್ಲಿಗೆ ಕ್ಯಾಚಿತ್ತರು. ತದ ನಂತರ 5ನೇ ಎಸೆತದಲ್ಲಿ ವಿಂಡೀಸ್​ ನಾಯಕ ಜೆಸನ್ ಹೋಲ್ಡರ್​ ಸ್ಟಂಪ್​ ಆದರು. ಕೊನೆಯ ಎಸೆತದಲ್ಲಿ (32.6) ಅಲ್ಜಾರಿ ಜೋಸೆಫ್​ (0) ಜಾಧವ್​ಗೆ ಕ್ಯಾಚ್​ ನೀಡುವ ಮೂಲಕ ಕುಲದೀಪ್​ ಹ್ಯಾಟ್ರಿಕ್​ ಪಡೆದುಕೊಂಡರು.

Last Updated : Dec 18, 2019, 11:41 PM IST

ABOUT THE AUTHOR

...view details