ದುಬೈ:ಧೋನಿ ನಾಯಕತ್ವದಲ್ಲಿ ಆಡಿರುವ ಕನ್ನಡಿಗ ಹಾಗೂ ಭಾರತ ತಂಡದ ಹಿರಿಯ ಆಟಗಾರ ರಾಬಿನ್ ಉತ್ತಪ್ಪ ತಮ್ಮ ಹಾಗೂ ಧೋನಿ ನಡುವಿನ ಸ್ನೇಹ ಸಂಬಂಧ ಹಾಗೂ ಅವರೊಂದಿಗೆ ರೂಮ್ ಹಂಚಿಕೊಂಡಿದ್ದ ಘಟನೆಗಳನ್ನು ಮೆಲುಕು ಹಾಕಿದ್ದಾರೆ.
ಭಾರತಕ್ಕೆ 2 ವಿಶ್ವಕಪ್ ತಂದುಕೊಟ್ಟಿದ್ದ ಮಹೇಂದ್ರ ಸಿಂಗ್ ಧೋನಿ ಆಗಸ್ಟ್ 15ರಂದು ಅಂತಾರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ್ದರು. ಅವರ ಈ ನಿರ್ಧಾರ ಬಹಳ ಜನರಿಗೆ ಆಶ್ಚರ್ಯ ತಂದಿತ್ತು. ಧೋನಿ ತಮ್ಮ ಇನ್ಸ್ಟಾಗ್ರಾಂ ಖಾತೆ ಮೂಲಕ ಈ ನಿರ್ಧಾರ ಪ್ರಕಟಿಸಿದ್ದರು. ಈ ಸಂದರ್ಭದಲ್ಲಿ ಹಲವು ಮಂದಿ ಹಾಲಿ-ಮಾಜಿ ಕ್ರಿಕೆಟಿಗರು ಧೋನಿ ಜೊತೆಗಿನ ನೆನಪುಗಳನ್ನು ಹಂಚಿಕೊಂಡಿದ್ದರು.
2007ರ ಚೊಚ್ಚಲ ಟಿ-20 ವಿಶ್ವಕಪ್ನಲ್ಲಿ ಧೋನಿ ನಾಯಕತ್ವದಲ್ಲಿ ಆಡಿದ್ದ ಕರ್ನಾಟಕದ ರಾಬಿನ್ ಉತ್ತಪ್ಪ ಕೂಡ ಧೋನಿ ಜೊತೆಗಿನ ಅವಿಸ್ಮರಣೀಯ ನೆನಪುಗಳು ಹಾಗೂ 2007ರ ಟಿ-20 ವಿಶ್ವಕಪ್ ಗೆದ್ದ ಸಂಭ್ರಮವನ್ನು ಸಂದರ್ಶನದ ವೇಳೆ ಹಂಚಿಕೊಂಡಿದ್ದಾರೆ.
ಅವರೊಂದಿಗೆ (ಧೋನಿ) ಕ್ರಿಕೆಟ್ ಆಡುವುದು ತುಂಬಾ ಸೊಗಸಾಗಿತ್ತು. ನಾನು ಎಂಎಸ್ರೊಂದಿಗೆ ಹಲವು ಉತ್ತಮ ಕ್ಷಣಗಳನ್ನು ಹಂಚಿಕೊಂಡಿದ್ದೇನೆ. ಅವರ ನಾಯಕತ್ವದಲ್ಲಿ ಕೆಲವು ಅದ್ಭುತ ಸಾಹಸಗಳನ್ನು ಮಾಡಿದ್ದೇವೆ. ನಿಸ್ಸಂಶಯವಾಗಿ 2007ರ ಟಿ-20 ವಿಶ್ವಕಪ್ ಗೆಲುವು ನಮ್ಮ ಅದ್ಭುತ ಕ್ಷಣಗಳಲ್ಲಿ ಒಂದು. ಏಕೆಂದರೆ ಪ್ರತಿದಿನ ನೀವು ದೇಶಕ್ಕೆ ವಿಶ್ವಕಪ್ ತಂದುಕೊಡಲಾಗದು. ಹಾಗಾಗಿ ಅದು ನಾನು ಹೆಚ್ಚು ಪ್ರೀತಿಸುವ ಕ್ಷಣ ಎಂದು ಉತ್ತಪ್ಪ ಹೇಳಿದ್ದಾರೆ.