ಮುಂಬೈ:ಟೀಂ ಇಂಡಿಯಾದ ವಿಕೆಟ್ ಕೀಪರ್-ಬ್ಯಾಟ್ಸ್ಮನ್ ರಿಷಭ್ ಪಂತ್ ನಿರ್ಣಾಯಕ ಟಿ-20 ಪಂದ್ಯದಲ್ಲಿ ಮತ್ತೆ ಮುಗ್ಗರಿಸಿದ್ದು, ನಿರೀಕ್ಷೆಯಂತೆ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಮುಂಬೈನ ವಾಂಖೆಡೆ ಮೈದಾನದಲ್ಲಿ ನಡೆದ ವಿಂಡೀಸ್ ವಿರುದ್ಧದ ಅಂತಿಮ ಟಿ-20 ಪಂದ್ಯ ಸರಣಿ ಗೆಲುವಿನ ನಿಟ್ಟಿನಲ್ಲಿ ಉಭಯ ತಂಡಗಳಿಗೆ ಮಹತ್ವದ್ದಾಗಿತ್ತು. ಮೊದಲು ಬ್ಯಾಟ್ ಮಾಡಿದ ಭಾರತ ಉತ್ತಮ ಆರಂಭ ಪಡೆದಿತ್ತು.
ರೋಹಿತ್ ಶರ್ಮಾ ವಿಕೆಟ್ ಉರುಳುತ್ತಿದ್ದಂತೆ ಬಡ್ತಿ ಪಡೆದು ಮೈದಾನಕ್ಕಿಳಿದ ಪಂತ್ ಮೇಲೆ ರನ್ ಹಿಗ್ಗಿಸುವ ದೊಡ್ಡ ಜವಾಬ್ದಾರಿ ಇತ್ತು. ದೊಡ್ಡ ಹೊಡೆತಗಳನ್ನು ಲೀಲಾಜಾಲವಾಗಿ ಬಾರಿಸುವ ಪಂತ್ ಇದೇ ಕಾರಣಕ್ಕೆ ಕೊಹ್ಲಿ ಸ್ಥಾನದಲ್ಲಿ ಬ್ಯಾಟಿಂಗ್ಗೆ ಬಂದಿದ್ದರು.
ಆದರೆ ಸ್ಪಿನ್ನರ್ ಹೇಡನ್ ವಾಲ್ಶ್ ಎಸೆತವನ್ನು ಸಿಕ್ಸರ್ ಸಿಡಿಸುವ ಪ್ರಯತ್ನದಲ್ಲಿ ಲಾಂಗ್ ಆನ್ ಬೌಂಡರಿ ಜಾಗದಲ್ಲಿ ಹೋಲ್ಡರ್ಗೆ ಕ್ಯಾಚಿತ್ತು ನಿರ್ಗಮಿಸಿದರು.
ಮೂರು ಟಿ-20 ಪಂದ್ಯಗಳಲ್ಲಿ ಪಂತ್ ಕ್ರಮವಾಗಿ 18,33,0 ರನ್ ಗಳಿಸಿದ್ದಾರೆ. ಪ್ರತಿಭಾವಂತ ಆಟಗಾರ ಸಂಜು ಸ್ಯಾಮ್ಸನ್ ಬದಲಿಗೆ ಫಾರ್ಮ್ನಲ್ಲಿಲ್ಲದ ಪಂತ್ ಆಯ್ಕೆ ಮಾಡಿದ್ದು, ಕ್ರಿಕೆಟ್ ಅಭಿಮಾನಿಗಳನ್ನು ಆಕ್ರೋಶಭರಿತರನ್ನಾಗಿ ಮಾಡಿತ್ತು. ಇದಕ್ಕೆ ಪೂರಕ ಎನ್ನುವಂತೆ ಪಂತ್ ಸಹ ಕಳಪೆ ಪ್ರದರ್ಶನ ಮುಂದುವರೆಸಿದ್ದಾರೆ.