ಬೆಂಗಳೂರು: ಕೊರೊನಾ ಸೋಂಕಿನ ಕಾರಣದಿಂದ ಅನಿರ್ದಿಷ್ಟಾವಧಿಗೆ ಮುಂದೂಡಲ್ಪಟ್ಟ 13ನೇ ಆವೃತ್ತಿಯ ಐಪಿಎಲ್ ಟೂರ್ನಿ ವಿದೇಶದಲ್ಲಿ ನಡೆದರೆ ಆರ್‌ಸಿಬಿ ತಂಡ ಹೆಚ್ಚು ಸಂತೋಷ ಪಡುತ್ತದೆ ಎಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮುಖ್ಯ ತರಬೇತುದಾರ ಸೈಮನ್ ಕ್ಯಾಟಿಚ್ ಹೇಳಿದ್ದಾರೆ.
ತಮ್ಮ ತಂಡದಲ್ಲಿ ಹೆಚ್ಚು ದಕ್ಷಿಣ ಆಫ್ರಿಕ ಮತ್ತು ಆಸ್ಟ್ರೇಲಿಯಾ ತಂಡದ ಆಟಗಾರರಿದ್ದಾರೆ. ಈ ಪಂದ್ಯಾವಳಿ ವಿದೇಶದಲ್ಲಿ ನಡೆದರೆ ಅದು ತಂಡಕ್ಕೆ ವರವಾಗಲಿದ ಎಂದಿದ್ದಾರೆ.
ಈ ಟೂರ್ನಿ ಆಸ್ಟ್ರೇಲಿಯಾ ಅಥವಾ ಬೇರೆಡೆ ಎಲ್ಲೇ ನಡೆಯುತ್ತದೆ ಎಂದು ಹೇಳುವುದೇ ಒಂದು ಆಸಕ್ತಿದಾಯಕ ವಿಷಯವಾಗಿದೆ. ಒಂದು ವೇಳೆ ಇದು ನಿಜವಾದರೆ ಕೆಲವು ತಂಡಗಳು, ನಿರ್ದಿಷ್ಟವಾಗಿ ಆರ್‌ಸಿಬಿ ವಿದೇಶದಲ್ಲಿ ಆಡಲು ತುಂಬಾ ಸಂತೋಷಪಡುತ್ತದೆ. ಏಕೆಂದರೆ ನಮ್ಮ ತಂಡದಲ್ಲಿರುವ ವಿದೇಶ ಆಟಗಾರರು ಹೆಚ್ಚಾಗಿ ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾದವರು, ಅವರೆಲ್ಲ ಆಸೀಸ್ ಕಂಡೀಷನ್ನಲ್ಲಿ ಆಡಲು ಆನಂದ ಪಡುತ್ತಾರೆ ಎಂದು ರೇಡಿಯೋವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.
ಬಹು ನಿರೀಕ್ಷಿತ ಐಪಿಎಲ್ ಟೂರ್ನಿ ಮಾರ್ಚ್ 29 ರಂದು ಪ್ರಾರಂಭವಾಗಬೇಕಿತ್ತು. ಕೊರೊನಾ ಸೋಂಕಿನ ಕಾರಣದಿಂದಾಗಿ ಮೊದಲು ಏಪ್ರಿಲ್ 15 ರವರೆಗೆ ಮುಂದೂಡಲಾಯಿತು. ಆದರೆ ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ರಾಷ್ಟ್ರವ್ಯಾಪಿ ಲಾಕ್‌ಡೌನ್ ಅನ್ನು ಮೇ 3 ರವರೆಗೆ ವಿಸ್ತರಿಸಿದ್ದು, ಈ ಹಿನ್ನೆಲೆಯಲ್ಲಿ ಐಪಿಎಲ್ ಅನ್ನು ಅನಿರ್ದಿಷ್ಟಾವಧಿಗೆ ಅಮಾನತುಗೊಳಿಸಲಾಗಿದೆ.