ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ನ ಕಳೆದ 12 ಆವೃತ್ತಿಗಳಲ್ಲಿ ಕಪ್ ಗೆಲ್ಲದಿದ್ದರೂ ಅತಿಹೆಚ್ಚು ಅಭಿಮಾನಿಗಳನ್ನ ಸಂಪಾದಿಸಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮಾಡಿಕೊಂಡಿರುವ ಎಡವಟ್ಟಿಗೆ ಅಭಿಮಾನಿಗಳು ಕೆರಳಿ ಕೆಂಡವಾಗಿದ್ದಾರೆ.
ಆರ್ಸಿಬಿ ತಂಡಕ್ಕೆ ಅಭಿಮಾನಿಗಳೇ ಆಧಾರ. ಪ್ರತಿ ಐಪಿಎಲ್ನಲ್ಲೂ ಕಪ್ ಗೆಲ್ಲದಿದ್ದಾಗ ನಾವು ನಿಮ್ಮೊಂದಿಗಿದ್ದೇವೆ ಎಂದು ಬೆಂಬಲ ಸೂಚಿಸುತಿದ್ದ ಅಭಿಮಾನಿಗಳು ಇದೀಗ ಆರ್ಸಿಬಿ ವಿರುದ್ಧ ತಿರುಗಿ ಬಿದ್ದಿದ್ದಾರೆ. ಅದಕ್ಕೆ ಕಾರಣ ಟ್ವಿಟರ್ ಖಾತೆಯಲ್ಲಿ ಬೆಂಗಳೂರು ಎಂಬ ಹೆಸರನ್ನ ತೆಗೆದು ಹಾಕಿರುವುದು.
Royal Challengers Bangalore ಎಂದು ಟ್ವಿಟರ್ ಖಾತೆ ಹೆಸರು ಹೊಂದಿದ್ದ ಆರ್ಸಿಬಿ ತಂಡ, ತನ್ನ ಟ್ವಿಟರ್ ಖಾತೆಯಿಂದ Bangalore ತೆಗುದು ಹಾಕಿದೆ. ಇದಕ್ಕೆ ಕನ್ನಡಿಗರು ಭಾರೀ ವಿರೋಧ ವ್ಯಕ್ತಪಡಿಸುತ್ತಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ನಿರ್ದೇಶಕ ಸಿಂಪಲ್ ಸುನಿ 'ಒಂದು ಕಪ್ ಗೆಲ್ಲದಿದ್ದರೂ, ಒಬ್ಬ ಕನ್ನಡಿಗನನ್ನೂ ಆಡಿಸದಿದ್ದರೂ ನಾವು ನಿಮ್ಮನ್ನು ಇಷ್ಟಪಡಲು ಕಾರಣ, ನಿಮ್ಮೊಳಗಿನ ರಾಯಲ್ ಚಾಲೆಂಜರ್ ಅಲ್ಲ. ನಿಮ್ಮ ಊರು, ಸೂರು, ಕ್ರೀಡಾಂಗಣ ಮತ್ತು ನೀವೆ ಆಗಿದ್ದ "ಬೆಂಗಳೂರು". ಈಗ ಅದನ್ನೇ ಬಿಟ್ಟು ಮುನ್ನೆಡೆಯಲು ಹೊರಟರೆ ಅಭಿಮಾನಿಗಳ ಕೆಂಗಣ್ಣು ಬಿದ್ದೀತು ದಯವಿಟ್ಟು ಬೆಂಗಳೂರು ಸೇರಿಸಿ, ಸೋಲೋ ಗೆಲುವೋ ಜೊತೆಗಂತು ಇರುತ್ತೇವೆ'. ಎಂದು ಆಗ್ರಹಿಸಿದ್ದಾರೆ.
ಆರ್ಸಿಬಿ ನಡೆಯಿಂದ ಕೆರಳಿರುವ ಅಭಿಮಾನಿಗಳು ನಾವು ಇಷ್ಟು ದಿನ ಬೆಂಬಲ ನೀಡಲು ಕಾರಣ ಬೆಂಗಳೂರು ಎಂಬ ಹೆಸರು. ಈಗ ಅದನ್ನೇ ಕೈ ಬಿಟ್ಟಿರುವ ನಿಮ್ಮ ತಂಡಕ್ಕೆ ನಮ್ಮ ಬೆಂಬಲ ಇಲ್ಲ ಎಂದು ಗುಡುಗಿದ್ದಾರೆ. ಈವರೆಗೆ ಯಾವ ತಂಡವೂ ನಗರದ ಹೆಸರನ್ನ ಕೈ ಬಿಟ್ಟಿಲ್ಲ. ಆದರೆ, ಆರ್ಸಿಬಿ ನಡೆ ಬೇಸರ ತರಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೆಲವರು ಆರ್ಸಿಬಿ ಟ್ವಿಟರ್ ಖಾತೆಯನ್ನ ಅನ್ಫಾಲೋ ಮಾಡುವ ಮೂಲಕ ಆರ್ಸಿಬಿಗೆ ನಮ್ಮ ಬೆಂಬಲವಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.