ನವದೆಹಲಿ :ವಿರಾಟ್ ಕೊಹ್ಲಿ ನೇತೃತ್ವದ ರಾಯಲ್ ಚಾಲೆಂಜರ್ಸ್ ತಂಡ 13ನೇ ಆವೃತ್ತಿಯ ಐಪಿಎಲ್ ಎತ್ತಿ ಹಿಡಿಯುವ ನೆಚ್ಚಿನ ತಂಡ ಎಂದು ಆಸ್ಟ್ರೇಲಿಯಾದ ಮಾಜಿ ಸ್ಪಿನ್ನರ್ ಬ್ರಾಡ್ ಹಾಗ್ ಅಭಿಪ್ರಾಯ ಪಟ್ಟಿದ್ದಾರೆ.
ಐಪಿಎಲ್ ಅಧ್ಯಕ್ಷ ಬ್ರಿಜೇಶ್ ಪಟೇಲ್ ಶುಕ್ರವಾರ ಸೆಪ್ಟೆಂಬರ್ 19ರಿಂದ ನವೆಂಬರ್ 8ರವರೆಗೆ 13ನೇ ಆವೃತ್ತಿಯ ಐಪಿಎಲ್ ಯುಎಇನಲ್ಲಿ ನಡೆಯಲಿದೆ ಎಂದು ಘೋಷಣೆ ಮಾಡಿದ್ದಾರೆ. ತಮ್ಮ ಯೂಟ್ಯೂಬ್ ಚಾನಲ್ನಲ್ಲಿ ಅಭಿಮಾನಿಗಳೊಂದಿಗೆ ನಡೆಸಿದ ಸಂವಾದದ ವೇಳೆ ಅವರ ಪ್ರಶ್ನೆಗೆ ಹಾಗ್ ಉತ್ತರಿಸುತ್ತಾ ಈ ಬಾರಿ ಐಪಿಎಲ್ ಟ್ರೋಫಿಯನ್ನು ವಿರಾಟ್ ಕೊಹ್ಲಿ ಬಳi ಎತ್ತಿಹಿಡಿಯಲಿದೆ ಎಂದಿದ್ದಾರೆ.
"ಅವರಿಗೆ(ಆರ್ಸಿಬಿ) ಐಪಿಎಲ್ ಟ್ರೋಪಿ ಗೆಲ್ಲುವ ಹೆಚ್ಚಿನ ಅವಕಾಶವಿದೆ. ಅವರು ಪೇಪರ್ನಲ್ಲಿ ಸದಾ ಉತ್ತಮ ತಂಡವನ್ನು ಹೊಂದಿರುತ್ತಾರೆ. ಆದರೆ, ಅದನ್ನು ಗೆಲುವಾಗಿ ಹೊರ ತರಲು ವಿಫಲರಾಗುತ್ತಿದ್ದಾರೆ " ಎಂದಿದ್ದಾರೆ.
ಆದರೆ, ಈ ಬಾರಿ ಆರ್ಸಿಬಿ ಆ್ಯರೋನ್ ಫಿಂಚ್ರನ್ನು ತಂಡಕ್ಕೆ ಸೇರಿಸಿಕೊಂಡಿದೆ. ಅವರು ಪವರ್ ಪ್ಲೇನಲ್ಲಿ ಸ್ಫೋಟಕ ಬ್ಯಾಟಿಂಗ್ ಆಡುವ ಸಾಮರ್ಥ್ಯವಿದ್ದು, ವಿರಾಟ್ ಮತ್ತು ಎಬಿಡಿಯ ಮೇಲಿನ ಒತ್ತಡವನ್ನು ಕಡಿಮೆ ಮಾಡಲಿದ್ದಾರೆ ಎಂದು ಹಾಗ್ ಅಭಿಪ್ರಾಯ ಪಟ್ಟಿದ್ದಾರೆ.
ಇನ್ನು, ಆರ್ಸಿಬಿ ಬೌಲಿಂಗ್ ದಾಳಿ ಕೂಡ ಈ ಬಾರಿ ಪ್ರಬಲವಾಗಿದೆ. ಡೇಲ್ ಸ್ಟೈನ್, ಕೇನ್ ರಿಚರ್ಡ್ಸನ್ ತಂಡ ಸೇರಿಕೊಳ್ಳುವುದರಿಂದ ತಂಡ ಸಮತೋಲನ ಕಾಪಾಡಿಕೊಳ್ಳಲಿದೆ. ಕಳೆದ ಎರಡು ವರ್ಷಗಳಿಗೆ ಹೋಲಿಸಿದ್ರೆ ತಂಡ ಬಲಿಷ್ಠವಾಗಲಿದೆ. ಅವರು ಟೂರ್ನಾಮೆಂಟ್ನಲ್ಲಿ ಉತ್ತಮ ಯೋಜನೆಗಳೊಂದಿಗೆ ಹೋಗಬೇಕಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಆರ್ಸಿಬಿ ಬಿಟ್ಟರೆ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ಗೂ ಹೆಚ್ಚಿನ ಅವಕಾಶವಿದೆ ಎಂದು ಹಾಗ್ ಅಭಿಪ್ರಾಯಪಟ್ಟಿದ್ದಾರೆ. ಆ ತಂಡದಲ್ಲಿ ಮೊದಲ ನಾಲ್ಕು ಬ್ಯಾಟ್ಸ್ಮನ್ಗಳು ಉತ್ತಮವಾಗಿದ್ದಾರೆ. ಜೊತೆಗೆ ಹಾರ್ದಿಕ್ ಪಾಂಡ್ಯ ಆಲ್ರೌಂಡರ್ ಆಟ ಹಾಗೂ ಬುಮ್ರಾ ಮತ್ತು ಮಲಿಂಗಾ ಜೋಡಿಯ ವೇಗದ ಬೌಲಿಂಗ್ ಮುಂಬೈ ಇಂಡಿಯನ್ಸ್ಗೆ ಬಲವಾಗಿದೆ ಎಂದು ಅವರು ತಿಳಿಸಿದ್ದಾರೆ.