ಬೆಂಗಳೂರು: ಆರ್ಸಿಬಿ ಐಪಿಎಲ್ ಎಲಿಮಿನೇಟರ್ ಪಂದ್ಯದಲ್ಲಿ ಹೈದರಾಬಾದ್ ವಿರುದ್ಧ ಸೋತು ಹೊರ ಬಂದಿದೆ. ಆರ್ಸಿಬಿ ನಿನ್ನೆಯ ಪಂದ್ಯದಲ್ಲಿ ಸೋಲುತ್ತಿದ್ದಂತೆ ಕೊಹ್ಲಿ ನಾಯಕತ್ವದಿಂದ ಕೆಳಗಿಳಿಬೇಕು ಎಂದು ಆಗ್ರಹಿಸಿದ್ದ ಮಾಜಿ ಕ್ರಿಕೆಟಿಗ ಗಂಭೀರ್ಗೆ ಆರ್ಸಿಬಿ ಪುಟ್ಟ ಅಭಿಮಾನಿಯೊಬ್ಬ ಭರ್ಜರಿ ತಿರುಗೇಟು ನೀಡಿದ್ದಾನೆ.
ಎಲಿಮಿನೇಟರ್ ಪಂದ್ಯದ ಬಳಿಕ ಗಂಭೀರ್, ನನ್ನ ಪ್ರಕಾರ ಆರ್ಸಿಬಿ ತಂಡದ ನಾಯಕತ್ವದಿಂದ ಕೊಹ್ಲಿ ಕೆಳಗಿಳಿಯಬೇಕು. 8 ವರ್ಷಗಳ ಕಾಲ ಆರ್ಸಿಬಿ ವೈಫಲ್ಯ ಅನುಭವಿಸಿದೆ. ತಂಡದ ನಾಯಕನಾಗಿ ಯಾರಾದರೂ ಬೇರೆ ನಾಯಕನಿದ್ದರೆ ನನಗೆ ತಿಳಿಸಿ. ನಾನು ಕೊಹ್ಲಿ ವಿರುದ್ಧವಾಗಿ ಏನೂ ಹೇಳುತ್ತಿಲ್ಲ. ಏಕೆಂದರೆ ನಾಯಕನಾದವನು ಮೆಚ್ಚುಗೆ ಪಡೆಯುವ ಜೊತೆಗೆ, ಟೀಕೆಗಳನ್ನು ಸ್ವೀಕರಿಸಬೇಕು ಎಂದು ಹೇಳಿದ್ದರು.
ಗಂಭೀರ್ ಈ ಹೇಳಿಕೆಗೆ ಈಗಾಗಲೇ ಟ್ವಿಟರ್ನಲ್ಲಿ ಪರ-ವಿರೋಧ ಚರ್ಚೆ ನಡೆಯುತ್ತಿದೆ. ಆದರೆ ಟ್ವಿಟರ್ನಲ್ಲಿ ವಿಡಿಯೋವೊಂದು ವೈರಲ್ ಆಗುತ್ತಿದ್ದು, ರಾಮು ಎಂಬ ಪುಟ್ಟ ಬಾಲಕನೊಬ್ಬ ಕೊಹ್ಲಿಯನ್ನು ಟೀಕಿಸಿರುವ ಗಂಭೀರ್ ವಿರುದ್ಧ ಕಿಡಿಕಾರಿದ್ದಾನೆ.
"ವಿರಾಟ್ ಕೊಹ್ಲಿಯನ್ನು ಗಂಭೀರ್ ಕೆಟ್ಟ ನಾಯಕ ಎಂದು ಹೇಳಿದ್ದಾರೆ. ಇದನ್ನು ಟ್ವಿಟರ್ನಲ್ಲಿ ಎಲ್ಲರೂ ಚರ್ಚೆ ಮಾಡುತ್ತಿದ್ದಾರೆ. ನಾಯಕನಾಗಿ 8 ವರ್ಷಗಳಾದರೂ ಆರ್ಸಿಬಿಗೆ ಒಂದೂ ಕಪ್ ಗೆದ್ದು ಕೊಟ್ಟಿಲ್ಲ ಎಂದಿದ್ದಾರೆ. ಆದರೆ ಕೊಹ್ಲಿಯನ್ನು ಟೀಕಿಸಲು ಗಂಭೀರ್ಗೆ ಏನು ಹಕ್ಕಿದೆ. ವಿರಾಟ್ ಕೊಹ್ಲಿ ವಿಶ್ವದ ಅತ್ಯುತ್ತಮ ಬ್ಯಾಟ್ಸ್ಮನ್. ಏಕದಿನ ಕ್ರಿಕೆಟ್ನಲ್ಲಿ ನಂಬರ್ ಒನ್, ಟೆಸ್ಟ್ನಲ್ಲಿ ಸ್ಟೀವ್ ಸ್ಮಿತ್ ನಂತರದ ಅತ್ಯುತ್ತಮ ಬ್ಯಾಟ್ಸ್ಮನ್ ಆಗಿದ್ದಾರೆ. ಟೆಸ್ಟ್ನಲ್ಲಿ 27 ಹಾಗೂ ಏಕದಿನ ಕ್ರಿಕೆಟ್ನಲ್ಲಿ 43 ಶತಕ ಸಿಡಿಸಿದ್ದಾರೆ. ಗಂಭೀರ್ಗೆ ಇದೆಲ್ಲಾ ಗೊತ್ತಿಲ್ಲ. ಅವರಿಗೆ ಕೊಹ್ಲಿ ಕಂಡರೆ ಇಷ್ಟವಿಲ್ಲ. ಅದಕ್ಕೆ ಈ ರೀತಿ ಕೊಹ್ಲಿ ವಿರುದ್ಧ ಹೇಳಿಕೆ ನೀಡುತ್ತಾರೆ" ಎಂದು ಆಕ್ರೋಶಭರಿತವಾಗಿ ಗಂಭೀರ್ ಹೇಳಿಕೆಯನ್ನು ಬಾಲಕ ಖಂಡಿಸಿದ್ದಾನೆ.