ಮುಂಬೈ:ಪ್ರಸಕ್ತ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ ಆರಂಭಗೊಳ್ಳಲು ಕೇವಲ ಒಂದು ವಾರಗಳ ಕಾಲ ಬಾಕಿ ಉಳಿದಿದೆ. ಈಗಾಗಲೇ ಎಲ್ಲ ಫ್ರಾಂಚೈಸಿಗಳು ಅಭ್ಯಾಸ ಶಿಬಿರ ಆರಂಭಿಸಿವೆ. ಐಪಿಎಲ್ ಟೂರ್ನಿಯಲ್ಲಿ ಮಿಂಚಲು ಅನೇಕ ಪ್ಲೇಯರ್ಸ್ ಸಜ್ಜುಗೊಳ್ಳುತ್ತಿದ್ದಾರೆ.
ಮೂರು ಸಲ ಚಾಂಪಿಯನ್ ಸಿಎಸ್ಕೆ ತಂಡ ಕೂಡ ಹೊಸ ಯೋಜನೆಯೊಂದಿಗೆ ಕಣಕ್ಕಿಳಿಯಲು ಸಜ್ಜಾಗಿದ್ದು, ಈಗಾಗಲೇ ಮುಂಬೈನಲ್ಲಿ ತರಬೇತಿ ಆರಂಭಿಸಿದೆ. ತಂಡದ ಆಲ್ರೌಂಡರ್ ರವೀಂದ್ರ ಜಡೇಜಾ ಕ್ವಾರಂಟೈನ್ ಮುಗಿಸಿ ನಿನ್ನೆ ತಂಡ ಸೇರಿಕೊಂಡಿದ್ದಾರೆ.
ಇದನ್ನೂ ಓದಿ: ಏಪ್ರಿಲ್ 8ರಂದು ಕ್ರಿಕೆಟಿಗ ಶ್ರೇಯಸ್ ಅಯ್ಯರ್‌ಗೆ ಶಸ್ತ್ರಚಿಕಿತ್ಸೆ
ತಂಡದ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ ಭೇಟಿ ಮಾಡಿರುವ ಬಗ್ಗೆ ಟ್ವಿಟರ್ನಲ್ಲಿ ಬರೆದುಕೊಂಡಿರುವ ಜಡ್ಡು, ನಾನು ಅವರನ್ನು ಭೇಟಿಯಾದಾಗೆಲ್ಲಾ ಮೊದಲ ಬಾರಿಗೆ ಭೇಟಿಯಾಗುತ್ತಿದ್ದೇನೆ ಎಂಬ ಭಾವ ಉಂಟಾಗುತ್ತದೆ. 2009ರಲ್ಲಿ ಮೊದಲ ಸಲ ಅವರನ್ನು ಭೇಟಿಯಾದಾಗಲೂ ಅದೇ ಉತ್ಸಾಹ, ಬಾಂಧವ್ಯ ಇತ್ತು. ರೆಸ್ಪೆಕ್ಟರ್ ಫಾರೆವರ್ ಎಂದು ಬರೆದುಕೊಂಡಿದ್ದಾರೆ.
2021 ಐಪಿಎಲ್ನಲ್ಲಿ ಧೋನಿ ನೇತೃತ್ವದ ಸಿಎಸ್ಕೆ ತಂಡ ಏಪ್ರಿಲ್ 10ರಂದು ಮೊದಲ ಪಂದ್ಯವನ್ನ ಡೆಲ್ಲಿ ಕ್ಯಾಪಿಟಲ್ ವಿರುದ್ಧ ಆಡುವ ಮೂಲಕ ಅಭಿಯಾನ ಆರಂಭ ಮಾಡಲಿದೆ. ಆಸ್ಟ್ರೇಲಿಯಾ ವಿರುದ್ಧ ನಡೆದಿದ್ದ ಸಿಡ್ನಿ ಟೆಸ್ಟ್ ವೇಳೆ ಗಾಯಗೊಂಡಿದ್ದ ಇವರು ಟೀಂ ಇಂಡಿಯಾದಿಂದ ಹೊರಬಿದ್ದಿದ್ದರು.
ಹೀಗಾಗಿ ಇಂಗ್ಲೆಂಡ್ ವಿರುದ್ಧದ ಏಕದಿನ, ಟೆಸ್ಟ್ ಹಾಗೂ ಟಿ20 ಸರಣಿಯಲ್ಲಿ ಕಾಣಿಸಿಕೊಂಡಿರಲಿಲ್ಲ. ಆಲ್ರೌಂಡರ್ ಜಡೇಜಾ ಇದೀಗ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದು, ಹೊಸ ಲುಕ್ನೊಂದಿಗೆ ಸಿಎಸ್ಕೆ ಕ್ಯಾಂಪ್ ಸೇರಿಕೊಂಡಿದ್ದಾರೆ.