ವೆಲ್ಲಿಂಗ್ಟನ್(ನ್ಯೂಜಿಲ್ಯಾಂಡ್):ವೆಲ್ಲಿಂಗ್ಟನ್ ಮೈದಾನದಲ್ಲಿ ನಾಳೆ ಕಿವೀಸ್ ಮತ್ತು ನ್ಯೂಜಿಲ್ಯಾಂಡ್ ತಂಡಗಳು ಮೊದಲ ಟೆಸ್ಟ್ ಪಂದ್ಯದಲ್ಲಿ ಮುಖಾಮುಖಿಯಾಗುತ್ತಿವೆ. ವಿಶೇಷ ಎಂದರೆ ಇದೇ ಮೈದಾನದಲ್ಲಿ ಟೀಂ ಇಂಡಿಯಾ ಕೋಚ್ ರವಿ ಶಾಸ್ತ್ರಿ ಕೂಡ ಅಂತಾರಾಷ್ಟ್ರೀಯ ಟೆಸ್ಟ್ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ್ದರು.
ಟೀಂ ಇಂಡಿಯಾ ಆಟಗಾರ ಚೇತೇಶ್ವರ್ ಪುಜಾರ ರವಿ ಶಾಸ್ತ್ರಿ ಅವರ ಚುಟುಕು ಸಂದರ್ಶನ ನಡೆಸಿರುವ ವಿಡಿಯೋವನ್ನ ಬಿಸಿಸಿಐ ಹಂಚಿಕೊಂಡಿದೆ. ಈ ಸಂದರ್ಶನದಲ್ಲಿ ಟೀಂ ಇಂಡಿಯಾ ಕೋಚ್ ರವಿ ಶಾಸ್ತ್ರಿ ತಮ್ಮ 39 ವರ್ಷಗಳ ಹಿಂದಿನ ಹಳೆಯ ನೆನಪುಗಳನ್ನ ಬಿಚ್ಚಿಟ್ಟಿದ್ದಾರೆ.
ನಾನು ಪದಾರ್ಪಣೆ ಮಾಡಿದ ಮೈದಾನ ಇದು. ಅದೇ ತಂಡದ ವಿರುದ್ಧ ಕ್ರಿಕೆಟ್ ಆಡಲು ಬರುತ್ತೇನೆ ಅಂತಾ ನಾನು ಎಂದೂ ಅಂದುಕೊಂಡಿರಲಿಲ್ಲ. ಡ್ರೆಸ್ಸಿಂಗ್ ರೂಂಗೆ ಹೋಗಿ ನೋಡಿದೆ ಯಾವುದೂ ಕೂಡ ಬದಲಾಗಿಲ್ಲ. ನಾನು 39 ವರ್ಷದ ಹಿಂದೆ ಇದೇ ಮೈದಾನದಲ್ಲಿ ಟೆಸ್ಟ್ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ್ದೆ. ಫೆ. 21ರಂದೇ ಇಲ್ಲಿಗೆ ಬರುತ್ತೇನೆ ಎಂದು ಊಹಿಸಿರಲಿಲ್ಲ ಎಂದಿದ್ದಾರೆ.
ನಾಳೆ ಬೆಳಗ್ಗೆ ಟೆಸ್ಟ್ ಪಂದ್ಯ ಪ್ರಾರಂಭವಾಗುತ್ತದೆ ಎಂದರೆ ನಾನು ಹಿಂದಿನ ದಿನ ರಾತ್ರಿ 9:30ಕ್ಕೆ ನ್ಯೂಜಿಲ್ಯಾಂಡ್ ತಲುಪಿದೆ. ದಿವಂಗತ ಕ್ರಿಕೆಟರ್ ಬಾಪು ನಾಡಕರ್ಣಿ ನನ್ನನ್ನು ಕರೆದುಕೊಂಡು ಹೋಗಲು ವಿಮಾನ ನಿಲ್ದಾಣಕ್ಕೆ ಬಂದಿದ್ದರು. ನಾನು ನೇರವಾಗಿ ಹೋಟೆಲ್ಗೆ ಹೋದೆ. ಅಲ್ಲಿ ಯಾರೂ ಇರಲಿಲ್ಲ. ಮರು ದಿನ ಬೆಳಿಗ್ಗೆ ನಾವು ಟಾಸ್ ಸೋತು ಫೀಲ್ಡಿಂಗ್ ನಡೆಸಬೇಕಾಯಿತು. ನಾನು ಯಾರನ್ನೂ ಭೇಟಿಯಾಗಿರಲಿಲ್ಲ, ನೇರವಾಗಿ ಮೈದಾನಕ್ಕೆ ಇಳಿದಿದ್ದೆ. ತಂಡದಲ್ಲಿ ಆಡುತ್ತಿದ್ದ ಅರ್ಧಕ್ಕೂ ಹೆಚ್ಚು ಆಟಗಾರರನ್ನ ನಾನು ಭೇಟಿ ಕೂಡ ಮಾಡಿರಲಿಲ್ಲ ಎಂದು ರವಿ ಶಾಸ್ತ್ರಿ ಹೇಳಿದ್ದಾರೆ.
ಮೊದಲ ಪಂದ್ಯದಲ್ಲಿ ಬೌಲಿಂಗ್ ಮಾಡಲು ಯಾವ ಆಟಗಾರರಾದರು ಒತ್ತಡಕ್ಕೆ ಸಿಲುಕಿರುತ್ತಾರೆ. ನಾನು ಕೂಡ ಒತ್ತಡದಿಂದಲೇ ಬೌಲಿಂಗ್ ಮಾಡಿದೆ. ಜೆರೆಮಿ ಕೂನಿ ಅವರನ್ನು ಔಟ್ ಮಾಡುವ ಮೂಲಕ ನನ್ನ ಆತ್ಮವಿಶ್ವಾಸ ಹೆಚ್ಚಿತು ಎಂದಿದ್ದಾರೆ. ಈ ಪಂದ್ಯದಲ್ಲಿ ರವಿ ಶಾಸ್ತ್ರಿ ಆರು ವಿಕೆಟ್ ಪಡೆದುಕೊಂಡಿದ್ದರು.
ಆಂದಿನ ಸಮಯದಲ್ಲಿ ತುಂಬಾ ಚಳಿ ಇತ್ತು. ನನ್ನ ಬಳಿ ಸ್ವೆಟರ್ ಕೂಡ ಇರಲಿಲ್ಲ. ಪಾಲಿ ಉಮ್ರಿಗರ್ ನನಗೆ ಸ್ವೆಟರ್ ನೀಡಿದ್ರು ಎಂದಿದ್ದಾರೆ. ಅಲ್ಲದೆ ಕರ್ನಾಟಕದ ಕ್ರಿಕೆಟ್ ಆಟಗಾರ ಗುಂಡಪ್ಪ ವಿಶ್ವನಾಥ್ ನನ್ನ ಬಾಲ್ಯದ ಹೀರೋ. ಅವರೊಂದಿಗೆ ಕ್ರಿಕೆಟ್ ಆಡಿದ್ದು ಉತ್ತಮ ಅನುಭವ ಎಂದಿದ್ದಾರೆ.