ಅಬುಧಾಬಿ: ಬುಧವಾರ ನಡೆದ ಆರ್ಸಿಬಿ ವಿರುದ್ಧದ ಪಂದ್ಯದಲ್ಲಿ ಆಕರ್ಷಕ ಅರ್ಧಶತಕ ಸಿಡಿಸಿ ಮುಂಬೈ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದ ಸೂರ್ಯಕುಮರ್ ಯಾದವ್ ಆಟಕ್ಕೆ ಮೆಚ್ಚುಗೆ ವ್ಯಕ್ತಪಡಿಸಿರುವ ಟೀಮ್ ಇಂಡಿಯಾ ಕೋಚ್ ರವಿ ಶಾಸ್ತ್ರಿ ತಾಳ್ಮೆ ಕಳೆದುಕೊಳ್ಳದಿರಲು ಸಲಹೆ ನೀಡಿದ್ದಾರೆ.
ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ಭಾರತ ತಂಡದ ಯಾವುದೇ ಮಾದರಿಯ ಕ್ರಿಕೆಟ್ಗೂ ಸೂರ್ಯಕುಮರ್ ಯಾದವ್ ಆಯ್ಕೆಮಾಡಿರಲಿಲ್ಲ. ಇದೇ ಕೋಪದಲ್ಲಿ ಅದ್ಭುತ ಬ್ಯಾಟಿಂಗ್ ಪ್ರದರ್ಶನ ತೋರಿದ್ದ ಸೂರ್ಯಕುಮಾರ್ ಕೇವಲ 49 ಎಸೆತಗಳಲ್ಲಿ 79 ರನ್ ಚಚ್ಚುವ ಮೂಲಕ ಭಾರತ ತಂಡದ ನಾಯಕ ಕೊಹ್ಲಿ ಎದುರೇ ತಮ್ಮ ತಂಡಕ್ಕೆ ಜಯ ತಂದುಕೊಟ್ಟು ತಾಕತ್ತು ಪ್ರದರ್ಶಿಸಿದ್ದರು.
ಸೂರ್ಯಕುಮಾರ್ ಹಾಗೂ ಕೊಹ್ಲಿ ಪಂದ್ಯದ ಸಮಯದಲ್ಲಿ ಎದುರು ಬದುರಾಗಿ ಗುರಾಯಿಸಿದ ಘಟನೆ ಕೂಡ ನಡೆದಿತ್ತು. ಇದು ಇಂಟರ್ನೆಟ್ನಲ್ಲಿ ಬಾರಿ ಸದ್ದು ಮಾಡುತ್ತಿದ್ದು, ಕೆಲವು ಕೊಹ್ಲಿ ಪರ, ಕೆಲವರು ಕೊಹ್ಲಿಯ ವಿರುದ್ಧ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಅಲ್ಲದೇ ಸೂರ್ಯಕುಮಾರ್ ಯಾದವ್ ಕೂಡ ಪಂದ್ಯದಲ್ಲಿ ತಮ್ಮನ್ನು ಆಯ್ಕೆ ಮಾಡದಿದ್ದ ಅಸಮಾಧಾನವನ್ನು ಹೊರ ಹಾಕುತ್ತಿದ್ದರು.
ಪಂದ್ಯದ ಮುಗಿಯುತ್ತಿದ್ದಂತೆ ಟ್ವೀಟ್ ಮಾಡಿರುವ ಭಾರತ ತಂಡದ ಕೋಚ್ ರವಿಶಾಸ್ತ್ರಿ, " ಸೂರ್ಯ ನಮಸ್ಕಾರ್, ಇದೇ ರೀತಿ ದೃಢವಾಗಿ ಮತ್ತ ತಾಳ್ಮೆಯಿಂದಿರು" ಎಂದು ಟ್ವೀಟ್ ಮಾಡಿದ್ದಾರೆ.
ಈಗಾಗಲೇ ಸೂರ್ಯಕುಮಾರ್ ಆಯ್ಕೆಯಾಗದ್ದಕ್ಕೆ ಹರ್ಭಜನ್ ಸಿಂಗ್ ಸೇರಿದಂತೆ ಹಲವಾರು ಕ್ರಿಕೆಟಿಗರು ಬಿಸಿಸಿಐ ನಡೆಯನ್ನು ಟೀಕಿಸಿದ್ದಾರೆ. ಕೆಲವರು ಇನ್ನು ಸಮಯ ಮೀರಿಲ್ಲ ತಂಡದ ಜೊತೆ ಯಾದವ್ ಅವರನ್ನು ಕರೆದುಕೊಂಡು ಹೋಗಬಹುದು ಎಂದು ಸಲಹೆ ನೀಡುತ್ತಿದ್ದಾರೆ.