ದುಬೈ :ಜಿಂಬಾಬ್ವೆ ವಿರುದ್ಧ ಆಲ್ರೌಂಡ್ ಪ್ರದರ್ಶನ ತೋರಿದ ಆಫ್ಘಾನಿಸ್ತಾನ ತಂಡ 2ನೇ ಟೆಸ್ಟ್ ಪಂದ್ಯವನ್ನು 6 ವಿಕೆಟ್ಗಳಿಂದ ಗೆಲ್ಲುವ ಮೂಲಕ ಸರಣಿಯನ್ನು 1-1ರಲ್ಲಿ ಸಮಬಲ ಸಾಧಿಸಿದೆ.
ಮೊದಲ ಇನ್ನಿಂಗ್ಸ್ನಲ್ಲಿ ಆಫ್ಘಾನಿಸ್ತಾನ 545 ರನ್ ಗಳಿಸಿತ್ತು. ಇದಕ್ಕುತ್ತರವಾಗಿ ಜಿಂಬಾಬ್ವೆ ಮೊದಲ ಇನ್ನಿಂಗ್ಸ್ನಲ್ಲಿ 287 ರನ್ಗಳಿಗೆ ಆಲೌಟ್ ಆಗಿದ್ದರಿಂದ ಆಫ್ಘಾನಿಸ್ತಾನ, ಜಿಂಬಾಬ್ವೆ ಮೇಲೆ ಫಾಲೋ ಆನ್ ಹೇರಿತ್ತು.
258 ರನ್ಗಳ ಹಿನ್ನಡೆಯೊಂದಿಗೆ 2ನೇ ಇನ್ನಿಂಗ್ಸ್ ಆರಂಭಿಸಿದ ಜಿಂಬಾಬ್ವೆ 4ನೇ ದಿನ 266 ರನ್ ಗಳಿಸಿತ್ತು. 5ನೇ ದಿನ ಈ ಮೊತ್ತಕ್ಕೆ 85 ರನ್ ಸೇರಿಸಿ 365ರನ್ಗಳಿಗೆ ಆಲೌಟ್ ಆಗುವ ಮೂಲಕ ಅತಿಥೇಯ ಆಫ್ಘಾನಿಸ್ತಾನಕ್ಕೆ ಗೆಲ್ಲಲು 108 ರನ್ಗಳ ಗುರಿ ನೀಡಿತ್ತು.
ಅದ್ಭುತ ಬೌಲಿಂಗ್ ನಡೆಸಿದ ರಶೀದ್ ಖಾನ್ 7 ವಿಕೆಟ್ ಪಡೆದರೆ, ಅಮೀರ್ ಹಂಝಾ, ಶಿರ್ಜಾದ್ ಮತ್ತು ಜಾವೇದ್ ಅಹ್ಮದಿ ತಲಾ ಒಂದು ವಿಕೆಟ್ ಪಡೆದರು. 108 ರನ್ಗಳ ಗುರಿಯನ್ನು ಆಫ್ಘಾನಿಸ್ತಾನ 26.1 ಓವರ್ಗಳಲ್ಲಿ 4 ವಿಕೆಟ್ ಕಳೆದುಕೊಂಡು ಗೆಲುವಿನ ನಗೆ ಬೀರಿತು. ಅಲ್ಲದೆ 2 ಪಂದ್ಯಗಳ ಟೆಸ್ಟ್ ಸರಣಿಯನ್ನು 1-1ರಲ್ಲಿ ಸಮಬಲ ಸಾಧಿಸಿತು.
ಸಂಕ್ಷಿಪ್ತ ಸ್ಕೋರ್ :
- ಆಫ್ಘಾನಿಸ್ತಾನ ಮೊದಲ ಇನ್ನಿಂಗ್ಸ್: 545-4 ಡಿಕ್ಲೇರ್ : ಶಾಹಿದಿ 200*, ಅಸ್ಗರ್ ಆಫ್ಘನ್ 164, ಇಬ್ರಾಹಿಂ ಜಾಡ್ರನ್ 72, ನಾಸಿರ್ ಜಮಲ್ 55
- ಜಿಂಬಾಬ್ವೆ ಮೊದಲ ಇನ್ನಿಂಗ್ಸ್ 287-10 : ಮಸ್ವರೆ 65, ಕೆವಿನ್ ಕಸುಜಾ 41, ಮುಸಕಂಡ 41, ಸಿಕಂದರ್ ರಾಜಾ 85, ರಶೀದ್ ಖಾನ್ 138ಕ್ಕೆ4, ಅಮೀರ್ ಹಂಝಾ 73ಕ್ಕೆ3, ಶಿರ್ಜಾದ್ 48ಕ್ಕೆ2
- ಜಿಂಬಾಬ್ವೆ 2ನೇ ಇನ್ನಿಂಗ್ಸ್ 365ಕ್ಕೆ ಆಲೌಟ್ : ಸೀನ್ ವಿಲಿಯಮ್ಸ್ ಅಜೇಯ 151, ಟ್ರಿಪಾನೋ 95, ರಶೀದ್ ಖಾನ್ 137ಕ್ಕೆ 7
- ಆಫ್ಘಾನಿಸ್ತಾನ 2ನೇ ಇನ್ನಿಂಗ್ಸ್ 26.1 ಓವರ್ಗಳಲ್ಲಿ 108-4: ರಹ್ಮತ್ ಶಾ 58, ಇಬ್ರಾಹಿಮ್ ಜಾಡ್ರನ್ 28, ಮುಜರಬನಿ 25ಕ್ಕೆ 2, ರಿಯಾನ್ ಬರ್ಲ್ 16ಕ್ಕೆ 2