ಕೋಲ್ಕತ್ತಾ: ಆರಂಭದಲ್ಲಿ ಕರ್ನಾಟಕ ಬೌಲರ್ಗಳ ದಾಳಿಗೆ ಸಿಲುಕಿ 6 ವಿಕೆಟ್ ಬೇಗ ಕಳೆದುಕೊಂಡರೂ ಅನುಸ್ತೂಪ್ ಮಜುಮ್ದಾರ್ ಅವರ ಶತಕದ ನೆರವಿನಿಂದ ಬೆಂಗಾಳ ಚೇತರಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.
ಕೋಲ್ಕತ್ತಾದ ಈಡನ್ ಗಾರ್ಡನ್ನಲ್ಲಿ ನಡೆಯುತ್ತಿರುವ ರಣಜಿ ಟ್ರೋಫಿ ಸೆಮಿಫೈನಲ್ ಪಂದ್ಯದಲ್ಲಿ ಎರಡೂ ತಂಡಗಳು ಸಮಾನ ಗೌರವ ಪಡೆದಿವೆ.
ಟಾಸ್ ಸೋತು ಬ್ಯಾಟಿಂಗ್ ಇಳಿದ ಬೆಂಗಾಳ ಕೇವಲ 67 ರನ್ ಗಳಾಗುವಷ್ಟರಲ್ಲಿ ಪ್ರಮುಖ 7 ವಿಕೆಟ್ ಕಳೆದುಕೊಂಡಿತು. ಆದರೆ ಅನುಸ್ತೂಪ್ ಮಜುಮ್ದಾರ್ ಬಾಲಂಗೋಚಿಗಳಾದ ಶಹ್ಬಾಜ್ ಅಹ್ಮದ್(35) ಹಾಗೂ ಆಕಾಶ್ ದೀಪ್(44) ಜೊತೆಗೂಡಿ ತಂಡದ ಮೊತ್ತವನ್ನು 250ರ ಗಡಿ ದಾಟಿಸುವಲ್ಲಿ ಸಫಲರಾದರು.
173 ಎಸೆತಗಳನ್ನೆದುರಿಸಿದ ಅನುಸ್ತೂಪ್ 18 ಬೌಂಡರಿ ಹಾಗೂ ಒಂದು ಸಿಕ್ಸರ್ ನೆರೆವಿನಿಂದ 120 ರನ್ ಗಳಿಸಿ ಔಟಾಗದೆ ಉಳಿದಿದ್ದಾರೆ. ಇವರಿಗೆ ಸಾಥ್ ನೀಡಿದ ಆಕಾಶ್ ದೀಪ್ 72 ಎಸೆತಗಳಲ್ಲಿ ತಲಾ 3 ಬೌಂಡರಿ ಹಾಗೂ ಸಿಕ್ಸರ್ ನೆರವಿನಿಂದ 44 ರನ್ ಗಳಿಸಿ ತಂಡದ ಮೊತ್ತವನ್ನು ಹೆಚ್ಚಿಸಿದರು.
ಒಟ್ಟಾರೆ ಬೆಂಗಾಲ 82 ಓವರ್ಗಳಲ್ಲಿ 9 ವಿಕೆಟ್ ಕಳೆದುಕೊಂಡು 275 ರನ್ ಗಳಿಸಿದೆ. ಅನುಸ್ತೂಪ್(120), ಆಕಾಸ್ ದೀಪ್(0) 2ನೇ ದಿನದ ಆಟಕ್ಕೆ ಬ್ಯಾಟಿಂಗ್ ಕಾಯ್ದಿರಿಸಿದ್ದಾರೆ.
ಇನ್ನು ಅದ್ಭುತ ಬೌಲಿಂಗ್ ದಾಳಿ ನಡೆಸಿದ ಕರ್ನಾಟಕದ ಪರ ಮಿಥುನ್ 3 , ರೋನಿತ್ ಮೋರೆ, ಪ್ರಸಿದ್ ಕೃಷ್ಣ ಹಾಗೂ ಕೆ.ಗೌತಮ್ ತಲಾ 2 ವಿಕೆಟ್ ಪಡೆದು ಮಿಂಚಿದರು.